
ಡೈಲಿ ವಾರ್ತೆ:ಜನವರಿ/28/2026
ರಾಜ್ಯಮಟ್ಟದ ರಾಷ್ಟ್ರೀಯ ಆವಿಷ್ಕಾರ ರಸಪ್ರಶ್ನೆಯಲ್ಲಿ ಉಳ್ಳೂರು ಶಾಲೆಯ ವಿದ್ಯಾರ್ಥಿನಿ ವಚನಗೆ ದ್ವಿತೀಯ ಸ್ಥಾನ

ಉಳ್ಳೂರು: ಡಿಡಿ ಚಂದನ ಕೇಂದ್ರ, ಬೆಂಗಳೂರು ಆಯೋಜಿಸಿದ್ದ ರಾಜ್ಯಮಟ್ಟದ ರಾಷ್ಟ್ರೀಯ ಆವಿಷ್ಕಾರ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ್ದ ಸ.ಹಿ.ಪ್ರಾ ಶಾಲೆ ಉಳ್ಳೂರು–11ರ 5ನೇ ತರಗತಿಯ ವಿದ್ಯಾರ್ಥಿನಿ ವಚನ ದೇವಾಡಿಗ ಅವರು ದ್ವಿತೀಯ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಮತ್ತಷ್ಟು ಹೆಚ್ಚಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರದ ಸ.ಹಿ.ಪ್ರಾ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಹರ್ಷ ಅವರೊಂದಿಗೆ ಮೈಸೂರು ವಿಭಾಗವನ್ನು ಪ್ರತಿನಿಧಿಸಿ ಉತ್ತಮ ಸಾಧನೆ ತೋರಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ನಡುವೆ ವಚನ ಮತ್ತು ಹರ್ಷ ಅವರ ಸಾಧನೆ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಾಧನೆಗೆ ಕಾರಣವಾದ ವಿದ್ಯಾರ್ಥಿನಿ ವಚನಾ ಹಾಗೂ ಅವರಿಗೆ ಸಮರ್ಪಕ ತರಬೇತಿ ನೀಡಿದ ಶಿಕ್ಷಕರಿಗೆ ಶಾಲಾ ಹಳೆಯ ವಿದ್ಯಾರ್ಥಿ ಸಂಘ, ಶಾಲಾ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ತುಂಬು ಹೃದಯದ ಅಭಿನಂದನೆ ಹಾಗೂ ಧನ್ಯವಾದಗಳನ್ನು ಅರ್ಪಿಸಲಾಗಿದೆ.
ವಚನಾಳ ಈ ಯಶಸ್ಸು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಗ್ರಾಮೀಣ ಶಾಲೆಗಳಲ್ಲಿಯೂ ಅಪಾರ ಪ್ರತಿಭೆ ಅಡಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.