
ಡೈಲಿ ವಾರ್ತೆ:ಜನವರಿ/28/2026
ಕೋಟೇಶ್ವರ| ಗಂಡನಿಂದ ಪತ್ನಿ, ಮಕ್ಕಳಿಗೆ ಕ್ರೂರ ಹಿಂಸೆ: ಚಿನ್ನ ಕಸಿದು ವಿದೇಶಕ್ಕೆ ಪಲಾಯನ, ಬಳಿಕ ತಲಾಕ್ ನೋಟೀಸ್ – ಪ್ರಕರಣ ದಾಖಲು

ಕುಂದಾಪುರ: ಪತ್ನಿ ಹಾಗೂ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟೇಶ್ವರ ಗ್ರಾಮದ ನಿವಾಸಿ ಆಸ್ಯಾ (42) ಎಂಬವರು ನೀಡಿದ ದೂರಿನ ಪ್ರಕಾರ, ಅವರು ಶೇಖ್ ಮಹಮ್ಮದ್ ಇಲಿಯಾಸ್ ಎಂಬವರೊಂದಿಗೆ ವಿವಾಹವಾಗಿದ್ದು, ವಿವಾಹದ ಬಳಿಕ ಗಂಡನ ಮನೆಯಲ್ಲೇ ವಾಸವಾಗಿದ್ದರು.
ಆರೋಪಿಯಾದ ಶೇಖ್ ಮಹಮ್ಮದ್ ಇಲಿಯಾಸ್ ವಿದೇಶದಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ, ಪತ್ನಿ ಹಾಗೂ ಮಕ್ಕಳೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳದೇ, ಅವರ ಜೀವನೋಪಾಯಕ್ಕೂ ಹಣ ನೀಡದೆ ನಿರ್ಲಕ್ಷ್ಯ ತೋರಿಸುತ್ತಿದ್ದನು ಎನ್ನಲಾಗಿದೆ.
ದೂರುದಾರೆ ಆಸ್ಯಾರವರ ಮಗನಿಗೆ ದಿನಾಂಕ 17-07-2025 ರಂದು ಆರೋಪಿಯು ಹಲ್ಲೆ ನಡೆಸಿದ್ದು, ಅದನ್ನು ಪ್ರಶ್ನಿಸಿದ ಪತ್ನಿಯ ಮೇಲೂ ಬೆಲ್ಟ್‌ನಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಆಸ್ಯಾರರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಳಿಕ ಗಂಡನೊಂದಿಗೆ ಮಾತುಕತೆಗೆ ಮುಂದಾದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ, ಅಕ್ಟೋಬರ್ ತಿಂಗಳಲ್ಲಿ ವಿದೇಶದಿಂದ ಊರಿಗೆ ಬಂದಿದ್ದ ಆರೋಪಿಯು ಆಸ್ಯಾ ರವರ ಚಿನ್ನಾಭರಣಗಳನ್ನು ಪಡೆದುಕೊಂಡು, ದಿನಾಂಕ 08-01-2026 ರಂದು ಮರುಕಳಿಸಿ ವಿದೇಶಕ್ಕೆ ತೆರಳಿದ್ದಾನೆ.
ಇದಾದ ಬಳಿಕ ಏಕಾಏಕಿ ದಿನಾಂಕ 13-01-2026 ರಂದು ನೋಂದಾಯಿತ ಅಂಚೆ ಮೂಲಕ ತಲಾಕ್ ನೋಟೀಸ್ ರವಾನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 85, 118, 115(2), 352 ಮತ್ತು 351(2) ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.