ಡೈಲಿ ವಾರ್ತೆ:ಜನವರಿ/28/2026

ಮನರೇಗಾ ಯೋಜನೆ ದುರ್ಬಲಗೊಳಿಸುವ ಕೇಂದ್ರದ ಧೋರಣೆ ಖಂಡಿಸಿ ಪೆರ್ಡೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ಕಾಪು: ಯು.ಪಿ.ಎ ಸರಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯ ಹೆಸರು ಹಾಗೂ ಮೂಲ ಸ್ವರೂಪ ಬದಲಾಯಿಸಿ, ಯೋಜನೆಯನ್ನು ದುರ್ಬಲಗೊಳಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆರ್ಡೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಶ್ರೀ ವಿನಯ್ ಕುಮಾರ್ ಸೊರಕೆ ಅವರು, “ಕೃಷಿಕರು ತಮ್ಮ ಸ್ವಂತ ಜಮೀನಿನಲ್ಲಿ ಬಾವಿ, ತೋಟ ನಿರ್ಮಾಣ, ಹೈನುಗಾರಿಕೆ, ಎಡೆಸಸಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಸ್ವತಃ ಉದ್ಯೋಗ ಸೃಷ್ಟಿಸಿಕೊಂಡು ಆದಾಯ ಗಳಿಸಲು ಅವಕಾಶ ನೀಡಿದ ಏಕೈಕ ಯೋಜನೆ ಉದ್ಯೋಗ ಖಾತ್ರಿ ಯೋಜನೆಯಾಗಿದೆ” ಎಂದು ಹೇಳಿದರು.

ಬಡವರ ಬದುಕಿಗೆ ಆಸರೆಯಾದ ಜನಪರ ಯೋಜನೆಯನ್ನು ರದ್ದುಪಡಿಸುವ ಅಥವಾ ದುರ್ಬಲಗೊಳಿಸುವ ಉದ್ದೇಶ ಕೇಂದ್ರ ಸರಕಾರಕ್ಕೆ ನಾಚಿಕೆಯ ಸಂಗತಿ ಎಂದು ಅವರು ಕಟುವಾಗಿ ಟೀಕಿಸಿದರು.
ಯು.ಪಿ.ಎ ಸರಕಾರ 100 ದಿನಗಳ ಉದ್ಯೋಗ ನೀಡಿ ಬಡವರ ಪರವಾದ ಆಡಳಿತ ನೀಡಿತ್ತು ಎಂದು ಹೇಳಿದರು.

ನಂತರ ಮಾತನಾಡಿದ ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ನೀರೆ ಕೃಷ್ಣ ಶೆಟ್ಟಿ ಅವರು, “ದೇಶದ ಹಳ್ಳಿಗಳ ಸಮಗ್ರ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ನಿರ್ಮಾಣ ಹಾಗೂ ಕೃಷಿಕರಿಗೆ ನೇರ ಆದಾಯ ಒದಗಿಸುವ ಶಕ್ತಿ ಹೊಂದಿರುವ ಏಕೈಕ ಯೋಜನೆ ಮನರೇಗಾ” ಎಂದು ಹೇಳಿದರು. ಗ್ರಾಮೀಣ ರಸ್ತೆಗಳು, ನೀರು ಸಂರಕ್ಷಣೆ, ಕೃಷಿ ಆಧಾರಿತ ಉದ್ಯೋಗಗಳು ಹಾಗೂ ಸ್ವಂತ ಜಮೀನಿನ ಅಭಿವೃದ್ಧಿ ಕಾರ್ಯಗಳು ಈ ಯೋಜನೆಯ ಫಲವಾಗಿ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

ಈ ಐತಿಹಾಸಿಕ ಯೋಜನೆಯನ್ನು ಜಾರಿಗೆ ತಂದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರ ಹಾಗೂ ಅದರ ಅಧ್ಯಕ್ಷೆಯಾಗಿದ್ದ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಅವರು ಸ್ಮರಿಸಿದರು. ಜೊತೆಗೆ ದೇಶದ ಆರ್ಥಿಕ ವ್ಯವಸ್ಥೆಗೆ ದೃಢವಾದ ನೆಲೆ ಕಟ್ಟಿದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ನೆನಪಿಸಿ, ಬಡವರ ಬದುಕಿಗೆ ಆಸರೆಯಾದ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ದೇಶದ ಜನತೆ ಒಪ್ಪುವುದಿಲ್ಲ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲ್, ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಮಂಡಲ ಪ್ರಧಾನ ಶ್ರೀ ಶಾಂತಾರಾಮ ಸೂಡರು, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾಂತ ರೈ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಪೂಜಾರಿ, ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಸಾಲಿಯಾನ್, ದಯಾನಂದ್ ಶೆಟ್ಟಿ, ಶೋಭಾ ಗಾಮ್ಸ್, ಲಕ್ಷ್ಮಿ, ಉದಯ್ ಕುಲಾಲ್, ರಾಘವೇಂದ್ರ, ಗಾಯತ್ರಿ, ಜಯಶ್ರೀ ಕುಲಾಲ್, ಎಸ್ಟಿ ಘಟಕದ ಬ್ಲಾಕ್ ಅಧ್ಯಕ್ಷ ರಾಮದಾಸ್ ನಾಯ್ಕ್, ಮಾಜಿ ಸಚಿವರ ಆಪ್ತ ಸಹಾಯಕ ಶ್ರೀ ನಬೀಲ್ ಉದ್ಯಾವರ, ರಾಜು ಸುವರ್ಣ, ಕಾರ್ತಿಕ್ ಆಚಾರ್ಯ, ಶಿವು ಕುಮಾರ್ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಪಾಲಾನುಭವಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.