ಡೈಲಿ ವಾರ್ತೆ:ಜನವರಿ/28/2026

ನರೇಗಾ ದುರ್ಬಲಗೊಳಿಸುವ ಕೇಂದ್ರದ ಕ್ರಮ ವಾಪಸ್ ಪಡೆಯಲಿ: ಬಂಟ್ವಾಳದಲ್ಲಿ ರಮಾನಾಥ ರೈ ನೇತೃತ್ವದ ಪಾದಯಾತ್ರೆ–ಪ್ರತಿಭಟನೆ

ಬಂಟ್ವಾಳ: ಜನರ ಹತ್ತಿರದ ಸರಕಾರವೆಂದು ಗುರುತಿಸಲ್ಪಡುವ ಸ್ಥಳೀಯಾಡಳಿತ ವ್ಯವಸ್ಥೆಯ ಸ್ವಾಯತ್ತತೆಯನ್ನು ಕಿತ್ತುಕೊಳ್ಳುವ ಕೇಂದ್ರ ಸರಕಾರದ ಕ್ರಮವನ್ನು ತಕ್ಷಣ ವಾಪಸ್ ಪಡೆಯಬೇಕು.
ಗ್ರಾಮ ಪಂಚಾಯತಿಗಳ ಅಧಿಕಾರವನ್ನು ಯಥಾವತ್ ಕಾಪಾಡಬೇಕು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಆಗ್ರಹಿಸಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರ, ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ರಮಾನಾಥ ರೈ ನೇತೃತ್ವದಲ್ಲಿ ‘ನರೇಗಾ ಬಚಾವೋ ಸಂಗ್ರಾಮ’ದ ಅಂಗವಾಗಿ ಮಣಿಹಳ್ಳದಿಂದ ಕೈಕಂಬವರೆಗೆ ನಡೆದ ಪಾದಯಾತ್ರೆಯ ನಂತರ, ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆ ಯು.ಪಿ.ಎ ಸರಕಾರದ ಮಹತ್ವಾಕಾಂಕ್ಷಿ ಹಾಗೂ ಬಡವರ ಪರ ಯೋಜನೆಯಾಗಿದ್ದು, ಇದನ್ನು ದುರ್ಬಲಗೊಳಿಸುವ ಕೇಂದ್ರ ಸರಕಾರದ ನಡೆ ಅತ್ಯಂತ ಖಂಡನೀಯ ಎಂದು ಅವರು ಹೇಳಿದರು. ಕಾಂಗ್ರೆಸ್ ಸರಕಾರಗಳು ಹಲವು ಜನಪರ ಕಾಯ್ದೆಗಳನ್ನು ಜಾರಿಗೆ ತಂದು ಬಡವರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದರೆ, ಬಿಜೆಪಿ ಶ್ರೀಮಂತರ ಹಾಗೂ ಬಂಡವಾಳಶಾಹಿಗಳ ಪರ ನಿಂತು ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹೆಸರೇ ಬಿಜೆಪಿಗೆ ಅಸಹ್ಯವಾಗಿದ್ದು, ಗಾಂಧೀಜಿಯನ್ನು ಒಪ್ಪದ ಬಿಜೆಪಿ ಅವರ ಹೆಸರನ್ನು ಅಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.
ಇಂತಹ ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಸಂಗ್ರಾಮ ನಡೆಸಲಿದೆ ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್, ಸದಸ್ಯರಾದ ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಂತರ ಪ್ರತಿಭಟನಾಕಾರರು ತಾಲೂಕು ತಹಶೀಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.