

ಡೈಲಿ ವಾರ್ತೆ:ಜನವರಿ/30/2026


ಕ್ಷೇತ್ರವೇ ಗೊತ್ತಿಲ್ಲದ ಪರಾಜಿತ ಅಭ್ಯರ್ಥಿಯಿಂದ ರಾಜಕೀಯ ಶವಸಾಧನೆ: ಪ್ರಸಾದ್ ರಾಜ್ ಕಾಂಚನ್ ವಿರುದ್ಧ ದಿನೇಶ್ ಅಮೀನ್ ತೀವ್ರ ವಾಗ್ದಾಳಿ

ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಡಿ ಬೆಂಗ್ರೆ ಕಡಲತೀರದಲ್ಲಿ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ಮೂವರು ಪ್ರವಾಸಿಗರು ಪ್ರಾಣ ಕಳೆದುಕೊಂಡಿರುವಂತಹ ಗಂಭೀರ ವಿಷಯವನ್ನೂ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ದಿನೇಶ್ ಅಮೀನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದಿರುವುದು ಕುಂದಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಪಷ್ಟವಾಗಿದ್ದರೂ, ಕ್ಷೇತ್ರದ ಗಡಿ ಅರಿಯದೇ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ವಿರುದ್ಧ ಆರೋಪ ಮಾಡುತ್ತಿರುವುದು, ಉಡುಪಿ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರ ರಾಜಕೀಯ ಅಜ್ಞಾನವನ್ನು ಬಹಿರಂಗಪಡಿಸಿದೆ ಎಂದು ಅವರು ಟೀಕಿಸಿದ್ದಾರೆ.
ಪ್ರವಾಸಿಗರ ಸುರಕ್ಷತೆ ಮತ್ತು ಆಡಳಿತದ ಹೊಣೆಗಾರಿಕೆ ಕುರಿತು ಮಾತನಾಡುವ ಬದಲು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಪರ ವಕಾಲತ್ತು ವಹಿಸುವ ಮೂಲಕ ಇಲಾಖೆಯ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರಕ್ಕೆ ಪರೋಕ್ಷ ಬೆಂಬಲ ನೀಡಲಾಗುತ್ತಿದೆ ಎಂದು ದಿನೇಶ್ ಅಮೀನ್ ಆರೋಪಿಸಿದ್ದಾರೆ.
ಪ್ರಬುದ್ಧ ಮತದಾರರನ್ನು ಹೊಂದಿರುವ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಇಂತಹ ವ್ಯಕ್ತಿ ಸ್ಪರ್ಧಿಸಿದ್ದೇ ಜನತೆಗೆ ಮಾಡಿದ ಅಪಮಾನವಾಗಿದ್ದು, ದುರ್ಘಟನೆಯ ಮೇಲೂ ರಾಜಕೀಯ ಮಾಡುವುದು ಅತ್ಯಂತ ಖಂಡನೀಯ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.