ಡೈಲಿ ವಾರ್ತೆ:ಜನವರಿ/30/2026

ಉಡುಪಿಯ ನಗರ ಭಾಗಕ್ಕೂ ಚಿರತೆ ಭೀತಿ: ಗರಡಿಮಜಲು ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ ಮೇಲೆ ದಾಳಿ ಶಂಕೆ.!

ಉಡುಪಿ: ಉಡುಪಿಯ ನಗರ ಭಾಗದಲ್ಲೂ ಚಿರತೆಗಳ ಕಾಟ ಆತಂಕಕ್ಕೆ ಕಾರಣವಾಗುತ್ತಿದೆ. ಉಡುಪಿ ನಗರದ ಗರಡಿಮಜಲು ಪರಿಸರದಲ್ಲಿ ರಾತ್ರಿ ಪಾರ್ಕಿಂಗ್ ಮಾಡಿದ್ದ ಖಾಸಗಿ ಬಸ್‌ಗೆ ಚಿರತೆ ನುಗ್ಗಿ ಹಾನಿ ಮಾಡಿರಬಹುದು ಎಂಬ ಗಂಭೀರ ಸಂಶಯ ವ್ಯಕ್ತವಾಗಿದೆ.

ರಾತ್ರಿ ಟ್ರಿಪ್‌ಗಳನ್ನು ಮುಗಿಸಿದ ಬಳಿಕ ಖಾಸಗಿ ಬಸ್ ಅನ್ನು ಗರಡಿಮಜಲು ಪ್ರದೇಶದಲ್ಲಿ ಪಾರ್ಕಿಂಗ್ ಮಾಡಲಾಗಿತ್ತು. ಬೆಳಿಗ್ಗೆ ಚಾಲಕ ಹಾಗೂ ಸಿಬ್ಬಂದಿ ಬಂದು ಪರಿಶೀಲಿಸಿದಾಗ ಬಸ್‌ನೊಳಗಿನ ಸೀಟುಗಳು ಸಂಪೂರ್ಣವಾಗಿ ಹರಿದು ಹೋಗಿದ್ದು, ಡ್ರೈವರ್ ಸೀಟು ಹಾಗೂ ಬಾನೆಟ್ ಮೇಲೆ ಇಡಲಾಗಿದ್ದ ಕುಶನ್‌ಗಳು ನಾಶವಾಗಿರುವುದು ಕಂಡುಬಂದಿದೆ.

ಆರಂಭದಲ್ಲಿ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾದರೂ, ಈ ಪ್ರದೇಶದಲ್ಲಿ ಚಿರತೆಯ ಸಂಚಾರ ಹೆಚ್ಚಿರುವುದರಿಂದ ಬಸ್ ಒಳಗೆ ಚಿರತೆ ನುಗ್ಗಿ ಹಾನಿ ಮಾಡಿರಬಹುದು ಎಂಬ ಶಂಕೆ ಮತ್ತಷ್ಟು ಬಲವಾಗಿದೆ.
ಬಸ್‌ನಲ್ಲಿ ಕಂಡುಬಂದ ದೊಡ್ಡ ಗಾತ್ರದ ಬೆರಳಚ್ಚುಗಳು ಈ ಸಂಶಯಕ್ಕೆ ಕಾರಣವಾಗಿದೆ.

ಈ ಭಾಗದಲ್ಲಿ ಈಗಾಗಲೇ ಚಿರತೆ ಕಾಟ ಹೆಚ್ಚಿರುವುದರಿಂದ ಅರಣ್ಯ ಇಲಾಖೆ ಚಿರತೆ ಹಿಡಿಯಲು ಬೋನು ಅಳವಡಿಸಿದೆ. ಚಿರತೆ ಬೋನಿಗೆ ಸೆರೆ ಸಿಕ್ಕುವವರೆಗೆ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.