
ಡೈಲಿ ವಾರ್ತೆ:ಜನವರಿ/30/2026
₹4 ಲಕ್ಷ ಲಂಚ ಪಡೆಯುವಾಗ ರೆಡ್‌ಹ್ಯಾಂಡ್: ಲೋಕಾಯುಕ್ತ ಬಲೆಗೆ ಬಿದ್ದ ಕೆ.ಪಿ.ಅಗ್ರಹಾರ ಇನ್ಸ್‌ಪೆಕ್ಟರ್ – ಮೈದಾನದಲ್ಲೇ ಹೈಡ್ರಾಮಾ!

ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳ ದಾಳಿ ಮುಂದುವರಿದಿದ್ದು, ₹5 ಲಕ್ಷ ಲಂಚ ಬೇಡಿಕೆಯ ಪ್ರಕರಣದಲ್ಲಿ ₹4 ಲಕ್ಷ ಸ್ವೀಕರಿಸುವಾಗ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚಾಮರಾಜಪೇಟೆಯ ಸಿಎಆರ್ (CAR) ಮೈದಾನದಲ್ಲಿ ನಡೆದ ಈ ಟ್ರ್ಯಾಪ್ ವೇಳೆ ಇನ್ಸ್‌ಪೆಕ್ಟರ್ ಗೋವಿಂದರಾಜು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಬಂಧನದ ಸಂದರ್ಭದಲ್ಲೇ ಲೋಕಾಯುಕ್ತ ಪೊಲೀಸರ ವಿರುದ್ಧ ಕೂಗಾಡಿ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ.
ಈ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಹಣ ಹೂಡಿಕೆ ವಂಚನೆ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಬಂಧಿಸದೇ ಕೇಸ್‌ನಿಂದ ಬಿಡಿಸುವುದಾಗಿ ಬೆದರಿಸಿ ಇನ್ಸ್‌ಪೆಕ್ಟರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ಧನರಾಜ್ ಎಂಬವರು ಕೆ.ಪಿ.ಅಗ್ರಹಾರ ಠಾಣೆಗೆ ದೂರು ನೀಡಿದ್ದು, ಸೂರಜ್, ಸುಜನ್ ಹಾಗೂ ಶ್ರೀನಿವಾಸ್ ಎಂಬವರು ಲಾಭದಾಸೆಯಿಂದ ₹19 ಲಕ್ಷ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣ ಜನವರಿ 22ರಂದು ದಾಖಲಾಗಿತ್ತು.
ಪ್ರಕರಣವನ್ನು ಡೀಲ್ ಮಾಡುವ ನೆಪದಲ್ಲಿ ಇನ್ಸ್‌ಪೆಕ್ಟರ್ ಗೋವಿಂದರಾಜು ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಇದರಲ್ಲಿ ಈಗಾಗಲೇ ₹1 ಲಕ್ಷ ಸ್ವೀಕರಿಸಿದ್ದರು. ಉಳಿದ ₹4 ಲಕ್ಷ ಪಡೆಯಲು ಚಾಮರಾಜಪೇಟೆಯ ಸಿಎಆರ್ ಮೈದಾನಕ್ಕೆ ಬಂದ ವೇಳೆ, ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮೊಹಮ್ಮದ್ ಅಕ್ಬರ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ದೇವರಾಜು ನೇತೃತ್ವದಲ್ಲಿ ಈ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಗಿದೆ.
ಬಂಧನದ ವೇಳೆ ಇನ್ಸ್‌ಪೆಕ್ಟರ್ ಗೋವಿಂದರಾಜು, “ನಾನು ನಿಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ ಸರ್” ಎಂದು ಕೂಗಾಡಿ ರಂಪಾಟ ನಡೆಸಿದರು. ಆದರೂ ಲೋಕಾಯುಕ್ತ ಪೊಲೀಸರು ಅವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು,
“ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ ಅಡಿಯಲ್ಲಿ ಟ್ರ್ಯಾಪ್ ಮಾಡಲಾಗಿದೆ. ಇನ್ಸ್‌ಪೆಕ್ಟರ್ ₹5 ಲಕ್ಷ ಲಂಚ ಡಿಮ್ಯಾಂಡ್ ಮಾಡಿದ್ದು, ಉಳಿದ ₹4 ಲಕ್ಷ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಪ್ರಕರಣದಲ್ಲಿ ಇನ್ನಿತರ ಅಧಿಕಾರಿಗಳ ಪಾತ್ರವಿದೆಯೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.