
ಡೈಲಿ ವಾರ್ತೆ:ಜನವರಿ/30/2026
ಐಟಿ ದಾಳಿಗೆ ಹೆದರಿ ಶೂಟ್ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

ಬೆಂಗಳೂರು, ಜ.30: ದೇಶ, ವಿದೇಶಗಳಲ್ಲಿ ವ್ಯಾಪಕ ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ – ಅಧ್ಯಕ್ಷರಾದ ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ರಿಚ್ಮಂಡ್ ಸರ್ಕಲ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಐಟಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಗಂಭೀರ ಸ್ಥಿತಿಯಲ್ಲಿ ಅವರನ್ನು ತಕ್ಷಣವೇ ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಾನ್ಫಿಡೆಂಟ್ ಗ್ರೂಪ್‌ಗೆ ಸಂಬಂಧಿಸಿದಂತೆ ಐಟಿ ಇಲಾಖೆ ತಪಾಸಣೆ ನಡೆಸುತ್ತಿದ್ದು, ಶುಕ್ರವಾರ ಮಧ್ಯಾಹ್ನವೂ ಅಧಿಕಾರಿಗಳು ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಉಂಟಾದ ತೀವ್ರ ಮಾನಸಿಕ ಒತ್ತಡವೇ ಈ ದುರ್ಘಟನೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸ್ಥಳದಲ್ಲಿದ್ದ ಅಧಿಕಾರಿಗಳೇ ರಾಯ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಸಿ.ಜೆ. ರಾಯ್ ಅವರು ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯಶಸ್ವಿ ಉದ್ಯಮ ನಡೆಸಿದ್ದು, ಕರ್ನಾಟಕ, ಕೇರಳ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಿದ್ದರು.
ದೇಶದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರು, ಐಷಾರಾಮಿ ಹಾಗೂ ಸ್ಪೋರ್ಟ್ಸ್ ಕಾರುಗಳ ಮೇಲೆ ಅಪಾರ ಆಸಕ್ತಿ ಹೊಂದಿದ್ದರು.
ರಾಯ್ ಅವರ ಅಕಾಲಿಕ ನಿಧನವು ಉದ್ಯಮ ವಲಯದಲ್ಲಿ ತೀವ್ರ ಆಘಾತ ಮತ್ತು ದುಃಖಕ್ಕೆ ಕಾರಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.