ಡೈಲಿ ವಾರ್ತೆ:ಜನವರಿ/30/2026

75 ವರ್ಷಗಳ ಸಹಕಾರಿ ಸೇವೆಗೆ ಸಂಭ್ರಮ: ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಮೃತ ಮಹೋತ್ಸವ ‘ಅಮೃತಯಾನ’ ಜ.31ಕ್ಕೆ

ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯ ಮಾನಂಜೆ ಗ್ರಾಮದಲ್ಲಿ 1950ರಲ್ಲಿ ಸ್ಥಾಪನೆಯಾಗಿ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿರುವ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದೀಗ ತನ್ನ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಸಂಘದ ಆಡಳಿತ ಮಂಡಳಿ ಗುರುವಾರ ಕುಂದಾಪುರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ್ದು, ಸಂಘದ ಅಧ್ಯಕ್ಷ ಪ್ರದೀಪ್ ಯಡಿಯಾಳ ಅವರು ಅಮೃತ ಮಹೋತ್ಸವದ ಕಾರ್ಯಕ್ರಮಗಳು ಹಾಗೂ ಸಂಘದ 75 ವರ್ಷಗಳ ಸಾಧನೆಗಳ ಕುರಿತು ಮಾಹಿತಿ ನೀಡಿದರು.

1950ರ ಮೇ 15ರಂದು ಕೀರ್ತಿಶೇಷ ಮಾನಂಜೆ ನಾರಾಯಣ ರಾಯರ ಅಧ್ಯಕ್ಷತೆಯಲ್ಲಿ ಕೇವಲ 39 ಸದಸ್ಯರೊಂದಿಗೆ ‘ಕಮಲಶಿಲೆ ವಿವಿಧೋದ್ದೇಶ ಸಹಕಾರ ಸಂಘ’ ಎಂಬ ಹೆಸರಿನಲ್ಲಿ ಆರಂಭಗೊಂಡ ಈ ಸಂಸ್ಥೆ, ಹಂತ ಹಂತವಾಗಿ ಬೆಳವಣಿಗೆಯನ್ನು ಕಂಡು ಇಂದು ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ, ಕಮಲಶಿಲೆ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಹಕಾರಿ ವಲಯದಲ್ಲಿ ‘ಮಾನಂಜೆ ಸೊಸೈಟಿ’ ಎಂದೇ ಜನಪ್ರಿಯವಾಗಿರುವ ಈ ಸಂಸ್ಥೆ, ಕಮಲಶಿಲೆ, ಹಳ್ಳಿಹೊಳೆ ಹಾಗೂ ಯಡಮೊಗೆ ಗ್ರಾಮಗಳ ಕೃಷಿಕರು ಮತ್ತು ಕೃಷಿ ಕಾರ್ಮಿಕರ ಕಲ್ಯಾಣಕ್ಕೆ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ.

ಸಂಘವು ಪ್ರಸ್ತುತ 19,000 ಸದಸ್ಯರನ್ನು ಹೊಂದಿದ್ದು, ರೂ.2.80 ಕೋಟಿ ಪಾಲು ಬಂಡವಾಳ, ರೂ.217.05 ಕೋಟಿ ಠೇವಣಿಗಳು ಹಾಗೂ ರೂ.230.06 ಕೋಟಿ ಸದಸ್ಯರ ಸಾಲ ಹೊರಬಾಕಿಯನ್ನು ಹೊಂದಿದೆ. ಜಿಲ್ಲಾ ಬ್ಯಾಂಕ್ ಮತ್ತು ಇತರ ಸಂಸ್ಥೆಗಳಲ್ಲಿ ಪಾಲು ಹಣ, ಕ್ಷೇಮನಿಧಿ ಸೇರಿ ಇದುವರೆಗೆ ಸುಮಾರು ರೂ.80 ಕೋಟಿ ವಿನಿಯೋಗಿಸಲಾಗಿದೆ. ಕಟ್ಟಡ ಹಾಗೂ ಸ್ಥಿರಾಸ್ತಿ ಸೇರಿ ರೂ.6.60 ಕೋಟಿ ಮೌಲ್ಯದ ಆಸ್ತಿಯನ್ನು ಸಂಘ ಹೊಂದಿದೆ.
2024-25ನೇ ಸಾಲಿನಲ್ಲಿ ಶೇ.97 ಸಾಲ ವಸೂಲಾತಿ ಸಾಧಿಸಿ ಆಡಿಟ್‌ನಲ್ಲಿ ‘ಎ’ ಶ್ರೇಣಿಯನ್ನು ಪಡೆದುಕೊಂಡಿರುವ ಸಂಘ, ರೂ.1177 ಕೋಟಿ ವ್ಯವಹಾರ ನಡೆಸಿ ರೂ.3.56 ಕೋಟಿ ನಿವ್ವಳ ಲಾಭ ಗಳಿಸಿದೆ. ಸತತ ಏಳು ವರ್ಷಗಳಿಂದ ಸದಸ್ಯರಿಗೆ ಶೇ.25 ಡಿವಿಡೆಂಡ್ ವಿತರಿಸಲಾಗುತ್ತಿದೆ ಎಂದು ಅಧ್ಯಕ್ಷರು ವಿವರಿಸಿದರು.

ಅಮೃತ ಮಹೋತ್ಸವದ ಅಂಗವಾಗಿ, ಹಳ್ಳಿಹೊಳೆ ಶಾಖೆಯಲ್ಲಿ ಸುಸಜ್ಜಿತ ಗೋದಾಮು ನಿರ್ಮಾಣ, ಪ್ರಧಾನ ಕಚೇರಿಯಲ್ಲಿ ಲಿಫ್ಟ್ ಅಳವಡಿಕೆ ಹಾಗೂ ಕೇಂದ್ರ ಕಚೇರಿ ಎದುರು ಸುಂದರ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಲಾಗಿದೆ. ಸಂಘದ ಪ್ರಥಮ 75 ಸದಸ್ಯರು ಹಾಗೂ ಈವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ 109 ಜನರನ್ನು ಅವರ ಮನೆಗಳಿಗೆ ತೆರಳಿ ಕುಟುಂಬದವರೊಂದಿಗೆ ಸನ್ಮಾನಿಸಲಾಗಿದೆ.

ಜ.31ರ ಶನಿವಾರ ಮಾನಂಜೆಯ ಪ್ರಧಾನ ಕಚೇರಿ ಆವರಣದಲ್ಲಿ ನಡೆಯುವ ಅಮೃತ ಮಹೋತ್ಸವ ಸಮಾರಂಭ ‘ಅಮೃತಯಾನ’ವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ಹಳ್ಳಿಹೊಳೆ ಶಾಖೆಯ ನೂತನ ಗೋದಾಮನ್ನೂ ಉದ್ಘಾಟಿಸಲಿದ್ದಾರೆ.

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಾಲಯದ ಅನುವಂಶಿಕ ಆಡಳಿತ ಧರ್ಮದರ್ಶಿ ಎಸ್. ಸಚ್ಚಿದಾನಂದ ಚಾತ್ರ, ಶಾಸಕರು, ಸಂಸದರು, ಅಧಿಕಾರಿಗಳು ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುದೀಪ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಾಯ್ಕ್, ನಿರ್ದೇಶಕರಾದ ರವೀಂದ್ರ, ಗುರುರಾಜ ನಾಯ್ಕ್, ಮಂಜುನಾಥ ರಾವ್ ಉಪಸ್ಥಿತರಿದ್ದರು.