
ಡೈಲಿ ವಾರ್ತೆ:ಜನವರಿ/31/2026
ಉಡುಪಿ ಜಿಲ್ಲಾ ಸರಕಾರಿ ವಕೀಲರ ವಿರುದ್ಧ ಕರ್ತವ್ಯಲೋಪ ಆರೋಪ: ತನಿಖಾ ವರದಿ ಬಳಿಕ ಕ್ರಮ – ಕಾನೂನು ಸಚಿವ ಎಚ್.ಕೆ.ಪಾಟೀಲ್

ಉಡುಪಿ: ಉಡುಪಿಯಲ್ಲಿ ಜಿಲ್ಲಾ ಸರಕಾರಿ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದ ಅವಧಿಯಲ್ಲಿ ನ್ಯಾಯಾಲಯದ ತನಿಖೆಯಲ್ಲಿರುವ ವಿವಿಧ ಪ್ರಕರಣಗಳಲ್ಲಿ ಸರಕಾರದ ಪರವಾಗಿ ಲಿಖಿತ ಹೇಳಿಕೆ ಸಲ್ಲಿಸದೆ ಕರ್ತವ್ಯಲೋಪ ಎಸಗಿರುವ ಕುರಿತು ಸ್ವೀಕೃತವಾದ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದು, ವರದಿ ಸ್ವೀಕೃತವಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ಗುರುವಾರ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕುರಿತು ಉಡುಪಿ ವಕೀಲರ ಸಂಘದ ಅಧ್ಯಕ್ಷರು ಸರಕಾರಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಹೇಳಿದರು.
ದೂರಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿಗಳು, ಜಿಲ್ಲಾ ಸರಕಾರಿ ವಕೀಲರು ಹಾಗೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ವಿಚಾರಣೆ ನಡೆಯುತ್ತಿದೆ. ವಿಚಾರಣಾ ವರದಿ ಸ್ವೀಕೃತವಾದ ಬಳಿಕ ಅದರ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಎ. ಸಂತೋಷ್ ಹೆಬ್ಬಾರ್ ಅವರು 2021–23ರ ಅವಧಿಯಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಿಲ್ಲಾ ಸರಕಾರಿ ವಕೀಲರಾಗಿ ಕಾರ್ಯನಿರ್ವಹಿಸಿದ್ದು, ಈ ಅವಧಿಯಲ್ಲಿ ತನಿಖಾ ಹಂತದಲ್ಲಿದ್ದ ಹಲವು ಪ್ರಕರಣಗಳಲ್ಲಿ ಸರಕಾರದ ಪರವಾಗಿ ಲಿಖಿತ ಹೇಳಿಕೆ ಸಲ್ಲಿಸದೇ ಇದ್ದ ಕುರಿತು ವಕೀಲರ ಸಂಘದ ಅಧ್ಯಕ್ಷರು ಸರಕಾರದ ಗಮನಕ್ಕೆ ತಂದಿದ್ದಾರೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಸಂತೋಷ್ ಹೆಬ್ಬಾರ್ ಅವರು ಎಷ್ಟು ಪ್ರಕರಣಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸಿಲ್ಲ ಹಾಗೂ ಇದರಿಂದ ಸರಕಾರಕ್ಕೆ ಉಂಟಾಗಿರುವ ನಷ್ಟದ ಕುರಿತು ಸಂಪೂರ್ಣ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಜ.22ರಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಒದಗಿಸುವಂತೆ ಜಿಲ್ಲಾ ಸರಕಾರಿ ವಕೀಲರು ಹಾಗೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜ.22ರಂದು ಪತ್ರ ಬರೆದು ಕೋರಲಾಗಿದೆ. ವಿಚಾರಣಾ ವರದಿ ಹಾಗೂ ಮಾಹಿತಿ ಸ್ವೀಕೃತವಾದ ಬಳಿಕ ವರದಿಯ ಅಂಶಗಳನ್ನು ಪರಿಶೀಲಿಸಿ, ಹಿಂದಿನ ಜಿಲ್ಲಾ ಸರಕಾರಿ ವಕೀಲರ ಕರ್ತವ್ಯಲೋಪದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿಧಾನಪರಿಷತ್‌ನಲ್ಲಿ ಉತ್ತರಿಸಿದ್ದಾರೆ.