
ಡೈಲಿ ವಾರ್ತೆ:ಜನವರಿ/31/2026
“ಸುವರ್ಣ ಸಂಭ್ರಮ ಸಾಧನೆ ಸ್ಮರಣೀಯ: ಹಿರೇಮಹಾಲಿಂಗೇಶ್ವರ ಮಿತ್ರವೃಂದದ ಸೇವೆ ಶ್ಲಾಘನೀಯ” – ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕೋಟ, ಜ.31:ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಕೋಟದ ಅಂಗಸಂಸ್ಥೆಯಾದ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ (ರಿ.), ಕೋಟ ಇವರ ವತಿಯಿಂದ ಆಯೋಜಿಸಲಾದ 50ನೇ ಸುವರ್ಣ ಸಂಭ್ರಮದ 5ನೇ ದಿನದ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮವು ಶುಕ್ರವಾರ ಸಂಜೆ ಗೀತಾನಂದ ಭವ್ಯ ವೇದಿಕೆಯಲ್ಲಿ ಅತ್ಯಂತ ಅದ್ದೂರಿಯಾಗಿ ನೆರವೇರಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ, ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನಿರಂತರವಾಗಿ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವೆ ಸಲ್ಲಿಸಿರುವ ಹಿರೇಮಹಾಲಿಂಗೇಶ್ವರ ಮಿತ್ರವೃಂದದ ಸಾಧನೆ ನಿಜಕ್ಕೂ ಸಾರ್ಥಕವಾದದ್ದು ಎಂದು ಶ್ಲಾಘಿಸಿದರು. ಇಂತಹ ಸುವರ್ಣ ಕ್ಷಣಗಳನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಹಿಂದೆ ರಥೋತ್ಸವವು ಕೆಲವೇ ದಿನಗಳಿಗೆ ಸೀಮಿತವಾಗಿದ್ದರೆ, ಮಿತ್ರವೃಂದ ಸ್ಥಾಪನೆಯ ನಂತರ ವಿಭಿನ್ನ ಹಾಗೂ ಅರ್ಥಪೂರ್ಣ ಚಟುವಟಿಕೆಗಳ ಮೂಲಕ ಎರಡು–ಮೂರು ದಿನಗಳ ಕಾಲ ಊರಿಗೆ ಹೆಮ್ಮೆಪಡುವಂತಹ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಇತಿಹಾಸ ಪ್ರಸಿದ್ಧ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಅಪಾರ ಕಾಳಜಿ ವಹಿಸುತ್ತಿದ್ದಾರೆ. ಊರಿನ ಜನರೂ ಕೂಡ ದೇವಸ್ಥಾನವನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಕಾಣುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ಪ್ರತಿ ವರ್ಷ ರಥೋತ್ಸವದ ಸಂದರ್ಭದಲ್ಲಿ ಎಲ್ಲಾ ಗಣ್ಯರು ಒಟ್ಟಾಗಿ ಭಾಗವಹಿಸುವುದು ವಿಶೇಷವಾಗಿದ್ದು, ತಾನು ಕೂಡ ಪ್ರತಿವರ್ಷ ಯಾವುದಾದರೂ ಕಾರಣದಿಂದ ಈ ರಥೋತ್ಸವದಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ತಿಳಿಸಿದರು. ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜ ಇನ್ನಷ್ಟು ಒಗ್ಗಟ್ಟಾಗಲಿ ಎಂದು ಹಾರೈಸಿದರು.
50ನೇ ಸುವರ್ಣ ಸಂಭ್ರಮದ ಅಂಗವಾಗಿ ಮಿತ್ರವೃಂದದ ಬೆಳವಣಿಗೆಗೆ ಸಹಕಾರ ನೀಡಿದ ಐವತ್ತು ಮಂದಿಯನ್ನು ಸನ್ಮಾನಿಸುವ ಉದ್ದೇಶದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ದ್ವಿತೀಯ ಹಂತವಾಗಿ 15 ಮಂದಿ ಗಣ್ಯರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ನಿವೃತ್ತ ಪ್ರಾಧ್ಯಾಪಕ ಬಾಲಕೃಷ್ಣ ಶೆಟ್ಟಿ, ನಿವೃತ್ತ ಶಿಕ್ಷಕ ರಾಜಾರಾಮ್ ಐತಾಳ್, ಸರಕಾರಿ ವೈದ್ಯಾಧಿಕಾರಿ ಡಾ. ಅಶೋಕ ಎಚ್., ಕೋಟ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಸದಾನಂದ ಜಿ., ದೇವಿಕಿರಣ ಕಾಂಪ್ಲೆಕ್ಸ್ ಮಾಲಕ ಶ್ರೀಕಾಂತ ಶೆಣೈ, ಲತಾ ಹೋಟೆಲ್ ಮಾಲಕ ವೆಂಕಟೇಶ ಪ್ರಭು, ಜನ್ನಾಡಿ ಫೆವರೇಟ್ ಕ್ಯಾಶ್ ಮಾಲಕ ಶಂಕರ ಹೆಗ್ಡೆ, ಹಿರೇಮಹಾಲಿಂಗೇಶ್ವರ ಮಿತ್ರವೃಂದದ ಗೌರವಾಧ್ಯಕ್ಷ ಆನಂದ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಸಾದ್ ಬಿಲ್ಲವ ಸ್ವಾಗತಿಸಿದರು. ಚಂದ್ರಾಚಾರಿ ಕೋಟ ನಿರೂಪಿಸಿದರು. ರಂಜಿತ್ ಕುಮಾರ್ ಬಾರಿಕೆರೆ ವಂದಿಸಿದರು.
ಈ ಸಂದರ್ಭದಲ್ಲಿ ಮಿತ್ರವೃಂದದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಸುವರ್ಣ ಸಂಭ್ರಮದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ರಾತ್ರಿ 9.30ರಿಂದ ದೇವದಾಸ ಕಾಫಿಕಾಡ್ ಮಂಗಳೂರು ತಂಡದಿಂದ ನೂತನ ನಾಟಕ “ನನ್ನ ಕಥೆ” ಪ್ರದರ್ಶನಗೊಂಡಿತು.