

ಡೈಲಿ ವಾರ್ತೆ: ಫೆ./06/2026
ಕಳ್ಳತನಕ್ಕೆ ಹೋಗಿ ಸಿಕ್ಕಿಬಿದ್ದವನಿಂದಲೇ ದೂರು: ಸಾರ್ವಜನಿಕರ ವಿರುದ್ಧ ಪ್ರಕರಣ ದಾಖಲಿಸಿದ ಆಟೋ ಚಾಲಕ

ಬೆಂಗಳೂರು: ನಗರದಲ್ಲಿ ಅಪರೂಪದ ಮತ್ತು ಚರ್ಚೆಗೆ ಗ್ರಾಸವಾಗಿರುವ ಘಟನೆ ಒಂದರಲ್ಲಿ, ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಆಟೋ ಚಾಲಕ, ಇದೀಗ ತಾನು ಹಲ್ಲೆಗೆ ಒಳಗಾಗಿದ್ದೇನೆ ಎಂದು ಪೊಲೀಸರಿಗೆ ದೂರು ನೀಡಿರುವುದು ಗಮನ ಸೆಳೆದಿದೆ.
ಬೆಂಗಳೂರಿನ ಆರ್.ಟಿ ನಗರ ನಿವಾಸಿ ಅಸ್ಗರ್ ಖಾನ್ (ಆಟೋ ಚಾಲಕ) ಎಂಬಾತ, ಮದ್ಯಪಾನ ಹಾಗೂ ಸಿಗರೇಟ್ ವ್ಯಸನಕ್ಕೆ ಹಣದ ಕೊರತೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಸ್ಕ್ರ್ಯಾಪ್ ಕದಿಯಲು ಮುಂದಾಗಿದ್ದ ಎನ್ನಲಾಗಿದೆ.
ಕಳೆದ ಜನವರಿ 31ರಂದು ರಾತ್ರಿ ಚೊಕ್ಕನಹಳ್ಳಿ ಮುಖ್ಯರಸ್ತೆಯಲ್ಲಿರುವ ಮನೆಯೊಂದರ ಕಂಪೌಂಡ್ ಹಾರಿ, ಎಲೆಕ್ಟ್ರಿಕಲ್ ವಸ್ತುಗಳನ್ನು ಕದಿಯಲು ಯತ್ನಿಸಿದ ವೇಳೆ ಮನೆಯ ಮಾಲೀಕರು ಆರೋಪಿಯನ್ನು ಹಿಡಿದಿದ್ದಾರೆ.
ಈ ಸಂದರ್ಭ ಅಸ್ಗರ್ ಖಾನ್ ತನ್ನ ಇಬ್ಬರು ಸಹಚರರಾದ ರಜಾಕ್ ಹಾಗೂ ಶ್ಯಾಮ್ ಜೊತೆ ಸೇರಿ ಮನೆಯ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯ ವೇಳೆ ರಜಾಕ್ ಎಂಬುವನು ಬಿಯರ್ ಬಾಟಲಿಯಿಂದ ಮನೆಯ ಮಾಲೀಕರ ತಲೆಗೆ ಹೊಡೆದ ಪರಿಣಾಮ ಗಾಯಗಳಾಗಿವೆ.
ಮನೆಯವರು ಕೂಗಿಕೊಂಡಾಗ ಸ್ಥಳೀಯ ನಿವಾಸಿಗಳು ಧಾವಿಸಿ ಬಂದಿದ್ದು, ಈ ವೇಳೆ ಆರೋಪಿಯ ಸಹಚರರು ಆಟೋದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಅಸ್ಗರ್ ಖಾನ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಕೋಪಗೊಂಡ ಕೆಲವರು ಆರೋಪಿಗೆ ಹಲ್ಲೆ ನಡೆಸಿದ್ದು, ಮರದ ತುಂಡಿನಿಂದ ತಲೆಗೆ ಹೊಡೆದ ಪರಿಣಾಮ ಅಸ್ಗರ್‌ಗೆ ರಕ್ತಗಾಯಗಳಾಗಿವೆ ಎಂದು ತಿಳಿದುಬಂದಿದೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಯ ತಿರುವು ಇಲ್ಲಿಯೇ ಆರಂಭವಾಗಿದ್ದು, ಕಳ್ಳತನಕ್ಕೆ ಯತ್ನಿಸಿ ಸಾರ್ವಜನಿಕರಿಂದ ಹಲ್ಲೆಗೆ ಒಳಗಾದ ಅಸ್ಗರ್ ಖಾನ್ ಇದೀಗ ಪೊಲೀಸರಿಗೆ ದೂರು ನೀಡಿದ್ದು, ತನ್ನ ಮೇಲೆ ಹಲ್ಲೆ ನಡೆಸಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾನೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳತನ ಯತ್ನ, ಹಲ್ಲೆ ಮತ್ತು ಪ್ರತಿಹಲ್ಲೆ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ.
ಕಳ್ಳತನಕ್ಕೆ ತೆರಳಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು, ನಂತರ ಸ್ವತಃ ದೂರುದಾರನಾಗಿರುವ ಈ ಘಟನೆ ನಗರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.