ಡೈಲಿ ವಾರ್ತೆ: ಫೆ./06/2026

ಮಹಿಳಾ ಅಧಿಕಾರಿಗೆ ಹನಿಟ್ರ್ಯಾಪ್‌ – ರಹಸ್ಯ ಕ್ಯಾಮೆರಾ ಅಳವಡಿಸಿ ₹50 ಲಕ್ಷ ಬ್ಲ್ಯಾಕ್‌ಮೇಲ್‌: ಮೂವರು ನಕಲಿ ಪತ್ರಕರ್ತರ ಬಂಧನ

ಬೆಳಗಾವಿ: ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ಕ್ಷಣಗಳನ್ನು ರಹಸ್ಯ ಕ್ಯಾಮೆರಾದ ಮೂಲಕ ಸೆರೆಹಿಡಿದು, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಬೆದರಿಕೆ ಒಡ್ಡಿ ₹50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ನಕಲಿ ಪತ್ರಕರ್ತರನ್ನು ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಮಹಿಳಾ ಅಧಿಕಾರಿಯ ಮನೆಗೆ ಅಕ್ರಮವಾಗಿ ನುಗ್ಗಿ, ಬೆಡ್‌ರೂಮ್ ಹಾಗೂ ಹಾಲ್‌ನ ಲೈಟ್‌ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬಳಿಕ ಆ ದೃಶ್ಯಗಳನ್ನು ಆಧಾರವಾಗಿ ಇಟ್ಟುಕೊಂಡು, ಹಣ ನೀಡದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು.
ಈ ಕಿರುಕುಳಕ್ಕೆ ಬೇಸತ್ತ ಮಹಿಳಾ ಅಧಿಕಾರಿ ಪೊಲೀಸ್‌ ಕಮೀಷನರ್‌ಗೆ ದೂರು ನೀಡಿದ್ದು, ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಬ್ಲ್ಯಾಕ್‌ಮೇಲ್ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಗೋಕಾಕ್‌ ನಗರದ ಜಲಾಲ್‌ ಗಲ್ಲಿಯ ಸಮೀರ್ ನಿಸಾರ್ ಅಹ್ಮದ್ ಶೇಖ್, ಗೋಕಾಕ್‌ ಹೊರವಲಯದ ಯೋಗಿಕೊಳ್ಳದ ಅಬ್ದುಲ್‌ರಶೀದ್ ಮಕಾಂದಾರ್ ಹಾಗೂ ಘಟಪ್ರಭಾ ನಿವಾಸಿ ಮೊಹಮ್ಮದ್ ದಿಲಾವರ್ ಬಾಲೇಕುಂದ್ರಿ ಎಂದು ಗುರುತಿಸಲಾಗಿದೆ.

ಪೊಲೀಸರು ಆರೋಪಿಗಳಿಂದ ಎರಡು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅಲ್ಟ್ರಾ ಮೊಬೈಲ್‌ಗಳು, ಒಂದು ವಿವೋ ಮೊಬೈಲ್‌, 6 ರಹಸ್ಯ ಕ್ಯಾಮೆರಾಗಳು, 64 ಜಿಬಿ ಪೆನ್‌ಡ್ರೈವ್‌, 128 ಜಿಬಿಯ 8 ಮೆಮೊರಿ ಕಾರ್ಡ್‌ಗಳು, ಎರಡು ಓಟಿಜಿ ಸಾಧನಗಳು ಹಾಗೂ ಇನ್ನೋವಾ ಕ್ರಿಸ್ಟಾ ಕಾರನ್ನು ಜಪ್ತಿ ಮಾಡಿದ್ದಾರೆ.

ಐಡಿಯಾವೇ ಬೆಚ್ಚಿಬೀಳಿಸುವಂಥದ್ದು:
ಆರೋಪಿಗಳು ಮಹಿಳಾ ಅಧಿಕಾರಿಯ ಮನೆಕೆಲಸದ ವ್ಯಕ್ತಿಯನ್ನು ಹಣದ ಆಮಿಷಕ್ಕೆ ಒಳಪಡಿಸಿ, ಅಧಿಕಾರಿಯವರು ಕಚೇರಿಗೆ ಹೋಗುವ ವೇಳೆ ಕಿಟಕಿಯಲ್ಲಿ ಕೀಲಿಯನ್ನು ಇಡುವ ವಿಚಾರವನ್ನು ಖಚಿತಪಡಿಸಿಕೊಂಡಿದ್ದರು. ಸುಮಾರು ಎರಡು ತಿಂಗಳ ಹಿಂದೆ ಕೀಲಿಯನ್ನು ಕಿಟಕಿಯಲ್ಲಿ ಇಟ್ಟಿದ್ದ ಸಂದರ್ಭದಲ್ಲಿ ಮನೆಕೆಲಸದ ವ್ಯಕ್ತಿಯಿಂದ ಮಾಹಿತಿ ಪಡೆದು ಮನೆಗೆ ನುಗ್ಗಿ, ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದರು.

ಖಾಸಗಿ ದೃಶ್ಯಗಳು ಸೆರೆಯಾಗುತ್ತಿದ್ದಂತೆ ಕ್ಯಾಮೆರಾಗಳನ್ನು ತೆಗೆದುಹಾಕಿ, ಮೆಮೊರಿ ಕಾರ್ಡ್‌ನಲ್ಲಿದ್ದ ವಿಡಿಯೋಗಳನ್ನು ಪೆನ್‌ಡ್ರೈವ್‌ಗೆ ವರ್ಗಾಯಿಸಿಕೊಂಡು, ಕಳೆದ ಎರಡು ತಿಂಗಳಿಂದ ನಿರಂತರವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಪ್ರಕರಣದ ಗಂಭೀರತೆಯನ್ನು ಮನಗಂಡ ಬೆಳಗಾವಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಮೂವರು ನಕಲಿ ಪತ್ರಕರ್ತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.