ಡೈಲಿ ವಾರ್ತೆ: ಫೆ./06/2026

ಸವಿತಾ ಸಮಾಜ ಸಂಘಟನೆ ಬಲವರ್ಧನೆಗೆ ಫೆ.10ರಂದು ಬ್ರಹ್ಮಾವರದಲ್ಲಿ ತಾಲ್ಲೂಕು ಮಟ್ಟದ ಸಮಾವೇಶ

ಬ್ರಹ್ಮಾವರ: ಬ್ರಹ್ಮಾವರ ತಾಲ್ಲೂಕು ಮಟ್ಟದ ಸವಿತಾ ಸಮಾಜದ ಘಟಕಗಳು ಹಾಗೂ ವಲಯ ಸಂಘಟನೆಗಳನ್ನು ಬಲಪಡಿಸುವ ಜೊತೆಗೆ, ಜಿಲ್ಲೆಯಾದ್ಯಂತ ಇರುವ ಘಟಕಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಫೆಬ್ರವರಿ 10ರಂದು ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಸಂದೀಪ್ ಪರಿಯಾಳ ಹೇಳಿದರು.

ಬ್ರಹ್ಮಾವರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸವಿತಾ ಸಮಾಜದ ಘಟಕಗಳಲ್ಲಿ ಕ್ಷೇಮನಿಧಿ, ಧರಪಟ್ಟಿ ಒಗ್ಗಟ್ಟು, ಪ್ರವಾಸ ಹಾಗೂ ವೃತ್ತಿಪರ ಸಂಘಟನೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರಿಯನ್ನು ಸಂಘಟನೆಯು ಹೊಂದಿದೆ ಎಂದರು.

ಪ್ರತಿ ವರ್ಷ ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು ಹಾವಂಜೆ ಘಟಕ, ಬಾರಕೂರು, ಕೊಕ್ಕರ್ಣೆ – ಮಂದಾರ್ತಿ, ಬ್ರಹ್ಮಾವರ, ಪೇತ್ರಿ ಘಟಕಗಳು ಹಾಗೂ ಕೋಟಾ ವಲಯದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಬ್ರಹ್ಮಾವರದಲ್ಲಿರುವ ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ಶಾಖೆಯ ಮೂಲಕ 7.5 ಶೇಕಡಾ ಬಡ್ಡಿದರದಲ್ಲಿ ಗೃಹ ಸಾಲ, 8.5 ಶೇಕಡಾ ಬಡ್ಡಿಯಲ್ಲಿ ವಾಹನ ಸಾಲ, ಸಲೂನ್ ಅಭಿವೃದ್ಧಿಗೆ ಸಾಲ, ವೃತ್ತಿಪರರ ಹೆಣ್ಣು ಮಕ್ಕಳ ವಿವಾಹಕ್ಕಾಗಿ ಸಾಲ ಸೇರಿದಂತೆ ವಿವಿಧ ಸಾಲ ಯೋಜನೆಗಳನ್ನು ವೃತ್ತಿಬಾಂಧವರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದರು.

ಸಹಕಾರಿಯೊಂದಿಗೆ ಕಾರ್ಯನಿರ್ವಹಿಸುವ ಸಲೂನ್ ಮಳಿಗೆಯಲ್ಲಿ ಸಲೂನ್ ಹಾಗೂ ಬ್ಯೂಟಿ ಪಾರ್ಲರ್‌ಗಳಿಗೆ ಅಗತ್ಯವಿರುವ ಎಲ್ಲಾ ಉಪಕರಣಗಳು ಮತ್ತು ಸಾಮಗ್ರಿಗಳು ಲಭ್ಯವಿವೆ ಎಂದು ಅವರು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ರಾಜು ಸಿ. ಭಂಡಾರಿ (ಕಿನ್ನಿಮುಲ್ಕಿ), ಸವಿತಾ ಸಹಕಾರಿಯ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ, ಬ್ರಹ್ಮಾವರ ತಾಲ್ಲೂಕು ಗೌರವಾಧ್ಯಕ್ಷ ಶಿವರಾಮ ಭಂಡಾರಿ (ಹಂದಾಡಿ), ಪ್ರಧಾನ ಕಾರ್ಯದರ್ಶಿ ಪುನೀತ್ ಭಂಡಾರಿ (ಬ್ರಹ್ಮಾವರ) ಹಾಗೂ ರಾಜ್ಯ ಪ್ರತಿನಿಧಿ ಬನ್ನಂಜೆ ಗೋವಿಂದ ಭಂಡಾರಿ ಉಪಸ್ಥಿತರಿದ್ದರು.