ಡೈಲಿ ವಾರ್ತೆ: ಫೆ./12/2026

ಜೇನು ಕೃಷಿ ಅಧ್ಯಯನ ನೆಪದಲ್ಲಿ ಮಣ್ಣು ಸಾಗಿಸುವ ಟಿಪ್ಪರ್‌ನಲ್ಲಿ ಮಕ್ಕಳನ್ನು ಕರೆದೊಯ್ದ ಆರೋಪ:
ಬೆಳ್ತಂಗಡಿಯಲ್ಲಿ ಸಾರ್ವಜನಿಕರ ಆಕ್ರೋಶ

ಮಂಗಳೂರು, ಫೆ.12: ಜೇನು ಕೃಷಿ ಅಧ್ಯಯನ ಪ್ರವಾಸದ ನೆಪದಲ್ಲಿ ಶಾಲಾ ಮಕ್ಕಳನ್ನು ತೆರೆದ ಪಿಕಪ್ ಹಾಗೂ ಟಿಪ್ಪರ್ ವಾಹನಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಕರೆದೊಯ್ಯಲಾಗಿದೆ ಎಂಬ ಗಂಭೀರ ಆರೋಪ ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ಕೇಳಿಬಂದಿದೆ.

ಬಳೆಂಜ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಅವರು ವಿದ್ಯಾರ್ಥಿಗಳನ್ನು ಸ್ಥಳೀಯ ನಾಲ್ಕೂರು ಸಮೀಪದ ಅನಿಲ್ ಫಾರ್ಮ್‌ಗೆ ಜೇನು ಕೃಷಿ ಅಧ್ಯಯನಕ್ಕಾಗಿ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಆದರೆ ಈ ಸಂದರ್ಭದಲ್ಲಿ ಸಣ್ಣ ಮಕ್ಕಳನ್ನು ಯಾವುದೇ ಭದ್ರತಾ ಕ್ರಮಗಳಿಲ್ಲದೆ ತೆರೆದ ಪಿಕಪ್ ಮತ್ತು ಮಣ್ಣು ಸಾಗಣೆಗಾಗಿ ಬಳಸುವ ಟಿಪ್ಪರ್ ವಾಹನದಲ್ಲಿ ಕೂರಿಸಿ ಸಾಗಿಸಿರುವುದು ಸಾರ್ವಜನಿಕರ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ವಿಶೇಷವಾಗಿ, ಟಿಪ್ಪರ್ ವಾಹನದಲ್ಲಿ ಮಕ್ಕಳನ್ನು ಮಣ್ಣು ತುಂಬಿಸಿದ ರೀತಿಯಲ್ಲಿ ಕೂರಿಸಿ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ನಿರ್ಲಕ್ಷ್ಯವೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಅಪಾಯಕಾರಿ ಸಾಗಣೆ ವೇಳೆ ಅನಾಹುತ ಸಂಭವಿಸಿದ್ದರೆ ಅದರ ಹೊಣೆ ಯಾರು ಹೊರುತ್ತಿದ್ದರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಶಾಲಾ ಮಕ್ಕಳ ಸುರಕ್ಷತೆ ಕುರಿತಂತೆ ಸ್ಪಷ್ಟ ಮಾರ್ಗಸೂಚಿಗಳಿರುವ ಸಂದರ್ಭದಲ್ಲಿ ಈ ರೀತಿಯ ನಿರ್ಲಕ್ಷ್ಯ ಅಸ್ವೀಕಾರಾರ್ಹ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಹಾಗೂ ಎರಡು ವಾಹನಗಳ ಚಾಲಕರ ವಿರುದ್ಧ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಶಿಕ್ಷಣ ಇಲಾಖೆಗೆ ಆಗ್ರಹಿಸಿದ್ದಾರೆ.
ಈ ಘಟನೆ ಕುರಿತು ಶಿಕ್ಷಣ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ತನಿಖೆ ನಡೆಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.