ಡೈಲಿ ವಾರ್ತೆ: ಫೆ./12/2026

ಅನಾಥ ಆಶ್ರಮದಲ್ಲಿ ಹುಟ್ಟುಹಬ್ಬ ಸಂಭ್ರಮಿಸಿದ ಯುವ ನಾಯಕ ಅಜಿತ್ ಕುಮಾರ್ ಶೆಟ್ಟಿ

ಬ್ರಹ್ಮಾವರ, ಫೆ.12: ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅವರು ತಮ್ಮ 32ನೇ ವರ್ಷದ ಹುಟ್ಟುಹಬ್ಬವನ್ನು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಮೂಲಕ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಗುರುವಾರ ಬೆಳಿಗ್ಗೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ತೋಡುಕಟ್ಟು ವಾರ್ಡಿನ ‘ಹೊಸ ಬದುಕು’ ಅನಾಥಾಶ್ರಮದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ ನಿರಾಶ್ರಿತರಿಗೆ ಬಟ್ಟೆ ಹಾಗೂ ಊಟ ವಿತರಿಸುವ ಮೂಲಕ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು.

ಸಾಮಾಜಿಕ ಬದ್ಧತೆಯ ಸಂಕೇತವಾಗಿ ಅನಾಥರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡ ಅಜಿತ್ ಕುಮಾರ್ ಶೆಟ್ಟಿ ಅವರು ಸಂತೋಷವನ್ನು ಹಂಚಿದಾಗ ಮಾತ್ರ ಜೀವನದ ಅರ್ಥ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮಾತನಾಡಿ ಅಜಿತ್ ಕುಮಾರ್ ಶೆಟ್ಟಿ ಅವರು ರಾಜಕೀಯದ ಜೊತೆಗೆ ಸಾಮಾಜಿಕ ಕಾಳಜಿಯನ್ನು ಕೂಡ ಹೊಂದಿರುವ ಯುವ ನಾಯಕರು. ತಮ್ಮ ಹುಟ್ಟುಹಬ್ಬವನ್ನು ಅನಾಥರೊಂದಿಗೆ ಆಚರಿಸಿರುವುದು ಇತರರಿಗೆ ಮಾದರಿ ಎಂದು ಹೇಳಿದರು.

ಶ್ರೀನಿವಾಸ್ ವಡ್ಡರ್ಸೆ ಮಾತನಾಡಿ ಯುವಕರಲ್ಲಿ ಸೇವಾಭಾವ ಬೆಳೆಸುವಂತಹ ಕಾರ್ಯ ಇದು. ಅಜಿತ್ ಅವರ ಮುಂದಿನ ಜೀವನ ಹಾದಿ ಇನ್ನಷ್ಟು ಯಶಸ್ಸುಗಳಿಂದ ಕೂಡಿರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ್ ಶೆಟ್ಟಿ, ರಮೇಶ್ ಮೆಂಡನ್, ಸುದರ್ಶನ್ ಉಪಸ್ಥಿತರಿದ್ದರು. ‘ಹೊಸ ಬದುಕು’ ಆಶ್ರಮದ ಮುಖ್ಯಸ್ಥ ವಿನಯ್ ಚಂದ್ರ ಸಾಸ್ತಾನ ಸ್ವಾಗತಿಸಿದರು.