ಡೈಲಿ ವಾರ್ತೆ: ಫೆ./13/2026

ಉಡುಪಿ ನಗರಸಭೆಯಲ್ಲಿ ಆಸ್ತಿತೆರಿಗೆ ವಂಚನೆ ಬಯಲು: ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ಲಕ್ಷಾಂತರ ರೂಪಾಯಿ ದುರುಪಯೋಗ – ಇಬ್ಬರು ಬಂಧನ

ಉಡುಪಿ, ಫೆ.13: ಉಡುಪಿ ನಗರಸಭೆಯಲ್ಲಿ ಆಸ್ತಿತೆರಿಗೆ ಪಾವತಿಯಲ್ಲಿ ಗಂಭೀರ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೌರಾಯುಕ್ತ ಮಹಾಂತೇಶ್‌ ಅವರು ನೀಡಿದ ದೂರಿನ ಪ್ರಕಾರ, ನಗರಸಭೆ ಕಚೇರಿಯಲ್ಲಿ ಆಸ್ತಿತೆರಿಗೆ ಪಾವತಿಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜಿಸಿ ಯೂನಿಯನ್ ಬ್ಯಾಂಕ್‌ನಲ್ಲಿ ನಗರಸಭೆಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಫೆಬ್ರವರಿ 3ರಂದು ಆಸ್ತಿತೆರಿಗೆ ಪಾವತಿಗಳ ಪರಿಶೀಲನೆ ವೇಳೆ, ಜನವರಿ 28ರಂದು ಪಾವತಿಯಾಗಿದೆಯೆಂದು ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಚಲನ್ ಪತ್ತೆಯಾದರೂ, ಅದೇ ದಿನಾಂಕದ ಬ್ಯಾಂಕ್ ವಿವರ ಪಟ್ಟಿಯಲ್ಲಿ ಪಾವತಿ ದಾಖಲಾಗಿರಲಿಲ್ಲ ಎಂಬುದು ಗಮನಕ್ಕೆ ಬಂದಿದೆ.

ಮುಂದಿನ ದಿನ ಫೆಬ್ರವರಿ 4ರಂದು ಮತ್ತಷ್ಟು ಪರಿಶೀಲನೆ ನಡೆಸಿದಾಗ, ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಕೆಲವು ಚಲನ್‌ಗಳು ಈಗಾಗಲೇ ಜನವರಿ 28ರಂದು ಜನರೇಟ್ ಆಗಿದ್ದ ಅದೇ ಚಲನ್ ಸಂಖ್ಯೆಯನ್ನು ಹೊಂದಿರುವುದು ಪತ್ತೆಯಾಗಿದೆ.

ಒಂದೇ ಚಲನ್ ಸಂಖ್ಯೆಗೆ ಎರಡು ಬೇರೆ ಬೇರೆ ದಿನಾಂಕಗಳಲ್ಲಿ ಸೀಲ್ ಹೊಂದಿರುವುದು ಗಂಭೀರ ಅನುಮಾನಕ್ಕೆ ಕಾರಣವಾಗಿದೆ.
ಯಾರೋ ಆರೋಪಿಗಳು ಯೂನಿಯನ್ ಬ್ಯಾಂಕ್ ಸೀಲ್ ಅನ್ನು ದುರ್ಬಳಕೆ ಮಾಡಿಕೊಂಡು ಆಸ್ತಿತೆರಿಗೆ ಪಾವತಿಸಿದ ಹಣವನ್ನು ವಂಚನೆ ಮಾಡಿರುವ ಶಂಕೆಯ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 207/2025 ರಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಕಲಂ 331(3), 331(4) ಹಾಗೂ 305 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ವೇಳೆ ಸುಪೇಶ್ (25) ಹಾಗೂ ಶಾಂತಾ (43) ಎಂಬಿಬ್ಬರು ಆರೋಪಿಗಳನ್ನು ಕೃಷ್ಣ ಮಠದ ರಾಜಾಂಗಣ ಸಮೀಪ ಬಂಧಿಸಲಾಗಿದೆ.

ಬಂಧಿತರಿಂದ ವಂಚನೆಗೆ ಬಳಸಿದ ಬ್ಯಾಂಕ್ ಸೀಲ್ ಹಾಗೂ ಸಂಬಂಧಿತ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.