

ಡೈಲಿ ವಾರ್ತೆ: ಫೆ./14/2026
ಚಿಟ್ಟಿಬೆಟ್ಟಿನಲ್ಲಿ ಮಾನವೀಯತೆಯ ಹಬ್ಬ: ಕೊರಗ ಕುಟುಂಬಗಳಿಗೆ ಸ್ವಂತ ಮನೆ ಸೌಭಾಗ್ಯ, ರಿಷಭ್ ಶೆಟ್ಟಿ ಆಗಮನದಿಂದ ಸಂಭ್ರಮ:
ದುರ್ಬಲರಿಗೆ ಶ್ರೀರಕ್ಷೆ ಭಗವಂತನಿಗೆ ಸಲ್ಲಿಸುವಷ್ಟೇ ಶ್ರೇಷ್ಠ ಕಾಯಕ- ಉಡುಪಿ ಪುತ್ತಿಗೆ ಶ್ರೀ…

ಕೋಟ: ದುರ್ಬಲರ ಸಮಾಜದ ಏಳಿಗೆಗಾಗಿ ಶ್ರಮಿಸುವ ಕಾರ್ಯ ಭಗವಂತನಿಗೆ ಸಲ್ಲಿಸುವ ಭಕ್ತಿಗಿಂತಲೂ ಶ್ರೇಷ್ಠವಾದುದು ಎಂದು ಸುಗುಣೇಂದ್ರ ಶ್ರೀಪಾದಗಳು ಹೇಳಿದರು.

ಶನಿವಾರ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ಚಿಟ್ಟಿಬೆಟ್ಟು ಕೊರಗ ಕಾಲೋನಿಯ ಎಂಟು ಮನೆಗಳ ಲೋಕಾರ್ಪಣಾ ಸಮಾರಂಭ ‘ಆಸರೆ–2026’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಕೊರಗ ಸಮುದಾಯದಂತಹ ಪರಂಪರೆಯ ಮುಗ್ಧ ಜೀವಿಗಳಿಗೆ ಆಸರೆ ಒದಗಿಸಿರುವುದು ಅತ್ಯಂತ ಶ್ರೇಷ್ಠ ಕಾಯಕ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಪುತ್ತಿಗೆ ಮಠದ ವತಿಯಿಂದ ಐದು ಲಕ್ಷ ರೂ.ಗಳ ದೇಣಿಗೆಯನ್ನು ಘೋಷಿಸಿ, ಭಾರತ ವಿಶ್ವಗುರುವಾಗಿ ವಿಶ್ವಮಟ್ಟದಲ್ಲಿ ಆದರ್ಶ ದೇಶವಾಗಲಿ ಎಂದು ಹಾರೈಸಿದರು.
ಸಮಾಜಸೇವಕ ಎಚ್.ಎಸ್. ಶೆಟ್ಟಿ ಮಾತನಾಡಿ, ಮಾನವೀಯ ಸೇವೆಯೇ ಬದುಕಿನ ಸಾರ್ಥಕತೆ ಎಂದು ಅಭಿಪ್ರಾಯಪಟ್ಟರು.

ಕೊರಗ ಸಮುದಾಯದ ಮನೆ ನಿರ್ಮಾಣ ಕಾರ್ಯದ ಮಾರ್ಗದರ್ಶಕರಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಚಿಟ್ಟಿಬೆಟ್ಟು ತನ್ನ ಸ್ವಗ್ರಾಮವಾಗಿದ್ದು, ಹಿಂದೆ ಇದ್ದ ಪರಿಸ್ಥಿತಿಗೂ ಇಂದಿನ ಸುಧಾರಿತ ಸ್ಥಿತಿಗೂ ಮಹತ್ತರ ವ್ಯತ್ಯಾಸವಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಸ್ವಾಮೀಜಿಯವರು ಕೊರಗ ಕಾಲೋನಿಯ ಎಂಟು ಮನೆಗಳಿಗೆ ತೆರಳಿ ದೀಪ ಬೆಳಗಿಸಿ ಶುಭಹಾರೈಸಿದರು.

ರಿಷಭ್ ಶೆಟ್ಟಿ ಗಮನಸೆಳೆದು ಕಾರ್ಯಕ್ರಮಕ್ಕೆ ವಿಶೇಷ: ಆಕರ್ಷಣೆಯಾಗಿ ಖ್ಯಾತ ನಟ ರಿಷಭ್ ಶೆಟ್ಟಿ ಆಗಮಿಸಿದರು. ತಮ್ಮ ‘ಕಾಂತಾರ’ ಚಿತ್ರದ ಮೂಲಕ ಮೂಲ ನಿವಾಸಿಗಳ ಸಂಸ್ಕೃತಿಗೆ ನೀಡಿದ ಮಹತ್ವವನ್ನು ಸ್ಮರಿಸಿ, ಕೊರಗ ಸಮುದಾಯದ ಡೋಲು ನಾದ ಹಾಗೂ ಅವರ ಪಾತ್ರದ ಕೊಡುಗೆಯನ್ನು ಕೊಂಡಾಡಿದರು. ಉಡುಪಿ ಪೇಜಾವರ ಶ್ರೀಗಳ ಸೇವೆಯನ್ನು ನೆನಪಿಸಿ, ಸುಗುಣೇಂದ್ರ ಶ್ರೀಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ವೈಭವದ ಮೆರವಣಿ:
ಸಭೆಗೆ ಮುನ್ನ ರಾಷ್ಟ್ರೀಯ ಹೆದ್ದಾರಿಯಿಂದ ಚಿಟ್ಟಿಬೆಟ್ಟಿಗೆ ಡೋಲು ವಾದನದೊಂದಿಗೆ ಸ್ವಾಮೀಜಿಯವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಕೊರಗ ಸಮುದಾಯದ ಮಹಿಳೆಯರು ಬಣ್ಣಬಣ್ಣದ ಸೀರೆಗಳಲ್ಲಿ, ಪುರುಷರು ಪಂಚೆಯಲ್ಲಿ ಭಾಗವಹಿಸಿ ಸಂಭ್ರಮವನ್ನು ಹೆಚ್ಚಿಸಿದರು.
🤝 ದಾನಿಗಳಿಗೆ ಗೌರವ:
ಮನೆ ನಿರ್ಮಾಣಕ್ಕೆ ಕೈಜೋಡಿಸಿದ ಹಲವಾರು ದಾನಿಗಳನ್ನು ಗೌರವಿಸಲಾಯಿತು.



ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು.ಮುಖ್ಯ ಅಭ್ಯಾಗತರಾಗಿ ನಾಡೋಜ ಡಾ.ಜಿ ಶಂಕರ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಫೂರ್, ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಸಂಪತ್ ಕುಮಾರ್ ಶೆಟ್ಟಿ,ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಮನೋವೈದ್ಯ ಡಾ.ಪ್ರಕಾಶ್ ತೋಳಾರ್,ಐಟಿಡಿಪಿ ಇಲಾಖೆಯ ವಿಶ್ವನಾಥ್,ಕೋಟತಟ್ಟು ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ,ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಭಾಶಿ,ಕೋಟತಟ್ಟು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.