ಡೈಲಿ ವಾರ್ತೆ: ಫೆ./15/2026

₹12 ಅಪ್‌ಡೇಟ್ ಹೆಸರಿನಲ್ಲಿ ₹2 ಲಕ್ಷ ಸೈಬರ್ ದೋಚಾಟ: ಕೋಟದಲ್ಲಿ ಗ್ಯಾಸ್ ಗ್ರಾಹಕನಿಗೆ ಬಲೆ

ಕೋಟ, ಫೆ.15: ಕೇವಲ ₹12 ಮೊತ್ತವನ್ನು “ಗ್ಯಾಸ್ ಅಪ್‌ಡೇಟ್” ಹೆಸರಿನಲ್ಲಿ ಪಾವತಿಸಲು ಹೇಳಿ, ಬಳಿಕ ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು ₹2,01,890 ಹಣ ದೋಚಿದ ಸೈಬರ್ ವಂಚನೆ ಘಟನೆ ಕೋಟ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಬಸವಪುರ ಮೊಳಹಳ್ಳಿ ಗ್ರಾಮದ ಗಣಪತಿ ರಾಮಣ್ಣ ಶೆಟ್ಟಿ (54) ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ದಿನಾಂಕ 08.02.2026 ರಂದು ಅವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದು “ಮುಂಬೈ ಮಹಾನಗರ ಗ್ಯಾಸ್” ಅಪ್‌ಡೇಟ್ ಮಾಡುವುದಾಗಿ ತಿಳಿಸಿ ₹12 ಹಣವನ್ನು ಟ್ರಾನ್ಸ್‌ಫರ್ ಮಾಡಲು ಸೂಚಿಸಲಾಗಿದೆ. ಇದನ್ನು ನಂಬಿದ ಅವರು ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಿದ್ದಾರೆ.
ಆದರೆ ಬಳಿಕ 11.02.2026 ರಂದು ಅವರ Union Bank of India ಖಾತೆಯಿಂದ ₹45,000 ಹಣ ಕಡಿತಗೊಂಡಿದೆ.
ಮುಂದಿನ ದಿನ 12.02.2026 ರಂದು Bank of Baroda ಮುಂಬೈ ಶಾಖೆಯ ಖಾತೆಯಿಂದ ₹58,900 ಹಾಗೂ ಅದೇ ದಿನ Karnataka Bank ಮುಂಬೈ ಶಾಖೆಯ ಖಾತೆಯಿಂದ ₹97,990 ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ.
ಈ ಮೂಲಕ ಒಟ್ಟು ₹2,01,890 ಹಣವನ್ನು ಸೈಬರ್ ವಂಚಕರು ಮೋಸಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2026 ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66(c) ಮತ್ತು 66(d) ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಅಪರಿಚಿತ ಕರೆಗಳು ಹಾಗೂ ಆನ್‌ಲೈನ್ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.