

ಡೈಲಿ ವಾರ್ತೆ: ಫೆ./16/2026
ಹಂಪಿ ಘೋರ ಪ್ರಕರಣಕ್ಕೆ ಗಲ್ಲು ಶಿಕ್ಷೆ: ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ, ಅಮೆರಿಕನ್ ಪ್ರವಾಸಿಗನ ಕೊಲೆ – ಗಂಗಾವತಿ ಕೋರ್ಟ್ ಐತಿಹಾಸಿಕ ತೀರ್ಪು

ಕೊಪ್ಪಳ: ಹಂಪಿ ಸಮೀಪದ ಸಾಣಾಪೂರದಲ್ಲಿ ನಡೆದಿದ್ದ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಅಮೆರಿಕದ ಪ್ರವಾಸಿಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗಂಗಾವತಿ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಈ ಪೈಶಾಚಿಕ ಕೃತ್ಯಕ್ಕೆ ಕಾರಣರಾದ ಮೂವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ.
ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರು ಫೆಬ್ರವರಿ 16ರಂದು ಶಿಕ್ಷೆ ಘೋಷಣೆ ಮಾಡಿದರು. ಈ ಪ್ರಕರಣದಲ್ಲಿ ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಎಂಬ ಮೂವರು ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ.
ಇದೇ ಫೆಬ್ರವರಿ 6ರಂದು ನ್ಯಾಯಾಲಯವು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. 2025ರ ಮಾರ್ಚ್ ತಿಂಗಳಲ್ಲಿ ಹಂಪಿ ಸಮೀಪದ ಸಾಣಾಪೂರದಲ್ಲಿ ನಡೆದ ಈ ಅಮಾನವೀಯ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಗುರಿಯಾಗಿತ್ತು. ಇಸ್ರೇಲ್ ಮೂಲದ ಮಹಿಳೆಯ ಮೇಲೆ ಕ್ರೂರ ಅತ್ಯಾಚಾರ ನಡೆದಿದ್ದು, ಅಮೆರಿಕದ ಪ್ರವಾಸಿಗನನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೂ ಭಾರೀ ಹೊಡೆತ ಬಿದ್ದಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಚುರುಕಿನ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಮೂವರೂ ಅಪರಾಧಿಗಳು ಎಂದು ಖಚಿತಪಡಿಸಿತು.
ಘಟನೆ ನಡೆದ ಕೇವಲ ಒಂಬತ್ತು ತಿಂಗಳಲ್ಲೇ ತೀರ್ಪು ಪ್ರಕಟಿಸಿರುವುದು ನ್ಯಾಯಾಂಗದ ದಕ್ಷತೆಗೆ ಸಾಕ್ಷಿಯಾಗಿದೆ. “ಇಂತಹ ಕ್ರೂರ ಕೃತ್ಯಗಳಿಗೆ ಸಮಾಜದಲ್ಲಿ ಯಾವುದೇ ಸ್ಥಳವಿಲ್ಲ” ಎಂಬ ಸ್ಪಷ್ಟ ಸಂದೇಶವನ್ನು ನ್ಯಾಯಾಲಯ ನೀಡಿದೆ.
ಈ ತೀರ್ಪು ಕಾನೂನಿನ ಕಠಿಣತೆಯನ್ನು ಮತ್ತೊಮ್ಮೆ ತೋರಿಸಿದ್ದು, ಅಪರಾಧಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆಯಾಗಿದೆ.