ಡೈಲಿ ವಾರ್ತೆ: ಫೆ./16/2026

ಬ್ರಹ್ಮಾವರ| ಬಾರ್‌ನಲ್ಲಿ ವೈಟರ್ ಮಲಗಿದ್ದಲ್ಲೇ ಮೃತ್ಯು: ಅಸ್ವಸ್ಥತೆಯಿಂದ ಸಾವು ಶಂಕೆ

ಬ್ರಹ್ಮಾವರ, ಫೆ.16: ಬ್ರಹ್ಮಾವರ ಠಾಣಾ ವ್ಯಾಪ್ತಿಯ ಚೇರ್ಕಾಡಿ ಗ್ರಾಮದ ಪೇತ್ರಿಯಲ್ಲಿರುವ ನ್ಯೂ ಕುಬೇರಾ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ವೈಟರ್‌ ಒಬ್ಬರು ಮಲಗಿದ್ದಲ್ಲೇ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಕುರುಡುಂಜೆ ಹೊಸಮನೆ, ಆರೂರು ನಿವಾಸಿ ರೂಪೇಶ್‌ ರಘುರಾಮ್‌ ಶೆಟ್ಟಿ (49) ಅವರು ನೀಡಿದ ದೂರಿನಂತೆ, ತಮ್ಮ ಬಾರ್‌ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಸುಮಾರು 63 ವರ್ಷ ಪ್ರಾಯದ ಚಂದ್ರಶೇಖರ್‌ ಪೂಜಾರಿ ಅವರು ಫೆಬ್ರವರಿ 15ರ ರಾತ್ರಿ ಸುಮಾರು 12:00 ಗಂಟೆಯಿಂದ ಫೆಬ್ರವರಿ 16ರ ಬೆಳಿಗ್ಗೆ 8:30ರ ನಡುವೆ ಬಾರ್‌ನ ಒಳಗಿನ ಕ್ಯಾಬಿನ್ ನಲ್ಲಿ ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.

ಮೃತ ಚಂದ್ರಶೇಖರ್‌ ಪೂಜಾರಿ ಅವರಿಗೆ ರಕ್ತದೊತ್ತಡ (ಬಿ.ಪಿ) ಹಾಗೂ ಮಧುಮೇಹ (ಶುಗರ್) ಸಮಸ್ಯೆ ಇದ್ದು, ಅನಾರೋಗ್ಯದ ಕಾರಣದಿಂದಲೇ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಅವರ ಮರಣದಲ್ಲಿ ಯಾವುದೇ ಸಂಶಯಾಸ್ಪದ ಅಂಶ ಕಂಡುಬಂದಿಲ್ಲವೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 13/2026 ಅಡಿಯಲ್ಲಿ ಬಿಎನ್‌ಎಸ್‌ಎಸ್ ಕಲಂ 194ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.