ಡೈಲಿ ವಾರ್ತೆ: ಫೆ./17/2026

ಕೆದೂರು ಸರಕಾರಿ ಶಾಲೆಯಲ್ಲಿ ಕಿಡಿಗೇಡಿಗಳ ದಾಂಧಲೆ: ನೋಟಿಸ್ ಬೋರ್ಡ್ ಗ್ಲಾಸ್ ಧ್ವಂಸ, ತರಗತಿಯಲ್ಲಿ ಹಾನಿ – ಕೋಟ ಠಾಣೆಯಲ್ಲಿ ಪ್ರಕರಣ ದಾಖಲು

ಕೋಟ, ಫೆ.17: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿ ಆಸ್ತಿಪಾಸ್ತಿಗೆ ಹಾನಿ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಗೀತಾ (51) ಅವರು ನೀಡಿದ ದೂರಿನಂತೆ, ಫೆ.14ರಂದು ಸಂಜೆ 5 ಗಂಟೆಗೆ ತರಗತಿಗಳು ಮುಗಿದ ಬಳಿಕ ಶಾಲೆಗೆ ಬೀಗ ಹಾಕಿ ತೆರಳಲಾಗಿತ್ತು. ಫೆ.16ರಂದು ಬೆಳಿಗ್ಗೆ 8.30ಕ್ಕೆ ಶಾಲೆ ತೆರೆದ ವೇಳೆ ಕಿಡಿಗೇಡಿಗಳು ಶಾಲಾ ಆವರಣಕ್ಕೆ ನುಗ್ಗಿ ನೋಟಿಸ್ ಬೋರ್ಡ್‌ನ ಗ್ಲಾಸ್ ಒಡೆದಿರುವುದು ಪತ್ತೆಯಾಗಿದೆ.
ಇದಲ್ಲದೆ, ಒಂದು ತರಗತಿ ಕೊಠಡಿಗೆ ನುಗ್ಗಿ ಗೋಡೆಗೆ ಅಳವಡಿಸಿದ್ದ ಬ್ಯಾನರ್‌ಗಳನ್ನು ಕೆಳಗೆ ಎಸೆದು ಅವ್ಯವಸ್ಥೆ ಸೃಷ್ಟಿಸಿದ್ದು, ಕೊಠಡಿಯಲ್ಲಿ ಬೆಂಕಿ ಪೆಟ್ಟಿಗೆ ಹಾಗೂ ಟಿಷ್ಯೂ ಪೇಪರ್‌ಗಳು ಪತ್ತೆಯಾಗಿವೆ. ಹುಡುಗರ ಶೌಚಾಲಯದಲ್ಲಿದ್ದ ಟ್ಯಾಪ್‌ಗಳನ್ನು ಕಿತ್ತು ಹಾಕಿದ್ದು, ಕೈ ತೊಳೆಯುವ ಸ್ಟೀಲ್ ಸಿಂಕ್ ಅನ್ನು ಕಿತ್ತು ಶಾಲೆಯ ಮಧ್ಯದ ಮೈದಾನದಲ್ಲಿ ಬಿಸಾಡಿರುವುದು ಕಂಡುಬಂದಿದೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆ ಯಲ್ಲಿ ಅಪರಾಧ ಕ್ರಮಾಂಕ 28/2026 ರಂತೆ ಕಲಂ 324 BNS ಹಾಗೂ 2 PDLP Act ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.