ಡೈಲಿ ವಾರ್ತೆ: ಫೆ./18/2026

ಹಂಪಿಯ 25ನೇ ಮಹೋತ್ಸವದಲ್ಲಿ ಕುಂದಾಪುರದ ಮೊಳಹಳ್ಳಿ ಕೆ. ಸಂತೋಷ್ ಶೆಟ್ಟಿಗೆ “ಸಾಧಕ ನಿರೂಪಣೆ ಪ್ರಶಸ್ತಿ 2026” ಗೌರವ

ಹಂಪಿ: ಐತಿಹಾಸಿಕ ವೈಭವ ಹಾಗೂ ಪುರಾಣ ಪ್ರಸಿದ್ಧತೆಯ ಪ್ರತೀಕವಾಗಿರುವ ಹಂಪಿಯಲ್ಲಿ ನಡೆಯಲಿರುವ 25ನೇ ವರ್ಷದ ಮಹೋತ್ಸವದ ಅಂಗವಾಗಿ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಷ್ಠಿತ “ಅತ್ಯುತ್ತಮ ನಿರೂಪಕ ಪ್ರಶಸ್ತಿ” ಹಾಗೂ 2026-27ನೇ ಸಾಲಿನ ಸಾಧನೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಕರ್ನಾಟಕ ಸಾಹಿತ್ಯ ಉದ್ಘೋಷಿತ ಸಂಘಟನೆ, ಹಂಪಿ ಉತ್ಸವ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಜನಪರ ಕನ್ನಡ ಸುದ್ದಿವಾಹಿನಿ ಹಾಗೂ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ ಘಟಕ ಹಂಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಮಹತ್ವದ ಕಾರ್ಯಕ್ರಮವು ರಾಜ್ಯ ಮಟ್ಟದ ಗಣ್ಯರು, ಪ್ರವಾಸೋದ್ಯಮ ಸಚಿವರು ಸೇರಿದಂತೆ ಹಲವು ಪ್ರಮುಖರ ಸಮ್ಮುಖದಲ್ಲಿ ನಡೆಯಲಿದೆ. ಹಂಪಿ ಉತ್ಸವದ ನಂತರ ಈ ಗೌರವ ಸಮಾರಂಭ ಮೇಳೈಸಲಿದೆ.

ಈ ಬಾರಿ ರಾಜ್ಯದ ಒಟ್ಟು 42 ಸಾಧಕರನ್ನು ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗಿದ್ದು, ನಿರೂಪಣೆ ಕ್ಷೇತ್ರದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕಾಜಾಡಿ ಮನೆತನದ ವರದಿಗಾರ ಹಾಗೂ ಪತ್ರಕರ್ತ ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ ಅವರನ್ನು “ಸಾಧಕ ನಿರೂಪಣೆ ಪ್ರಶಸ್ತಿ 2026”ಗೆ ಆಯ್ಕೆ ಮಾಡಲಾಗಿದೆ.
ಕೆ. ಸಂತೋಷ್ ಶೆಟ್ಟಿ ಅವರು ಇದುವರೆಗೆ ನೂರಾರು ವೇದಿಕೆ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ನಾಗಮಂಡಲ, ಸನ್ಮಾನ ಸಮಾರಂಭಗಳು, ಹುಟ್ಟುಹಬ್ಬದ ಕಾರ್ಯಕ್ರಮಗಳು ಹಾಗೂ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ.

ಪ್ರಸ್ತುತ ಅವರು ಸುದ್ದಿ ಮನೆ ಕನ್ನಡ ವಾರಪತ್ರಿಕೆ, ಬೆಂಗಳೂರು ಇದರ ಬ್ಯೂರೋ ಚೀಫ್ ಆಗಿ, ಡೈಲಿ ವಾರ್ತೆ ಕನ್ನಡ ವೆಬ್‌ಸೈಟ್‌ನ ವರದಿಗಾರರಾಗಿ ಹಾಗೂ ಕಲ್ಯಾಣ ವೈಭವ ಕನ್ನಡ ವಾರಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳ ಸಂಘಟಕರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರಿಗೆ ಈಗಾಗಲೇ ರಾಷ್ಟ್ರೀಯ ಮಾಧ್ಯಮ ಪುರಸ್ಕಾರ, ಮಾಧ್ಯಮ ಸೇವಾ ರತ್ನ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಗೌರವಗಳು ಲಭಿಸಿವೆ. ನಿರಂತರ ಪರಿಶ್ರಮ, ಸ್ಪಷ್ಟವಾದ ವಾಣಿ ಶೈಲಿ ಹಾಗೂ ವೇದಿಕೆ ಹಿಡಿತದ ಮೂಲಕ ಗುರುತಿಸಿಕೊಂಡಿರುವ ಸಂತೋಷ್ ಶೆಟ್ಟಿಯವರ ಈ ಸಾಧನೆಗೆ ಮತ್ತೊಂದು ಪ್ರತಿಷ್ಠಿತ ಗೌರವ ಸೇರ್ಪಡೆಯಾಗಿದೆ.

ಹಂಪಿಯ ಮಹೋತ್ಸವದ ವೇದಿಕೆಯಲ್ಲಿ ರಾಜ್ಯದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಇದು ಕುಂದಾಪುರ ಹಾಗೂ ಉಡುಪಿ ಜಿಲ್ಲೆಯ ಹೆಮ್ಮೆಯ ವಿಷಯವಾಗಿದೆ.