ಡೈಲಿ ವಾರ್ತೆ: ಫೆ./19//2026

ಕ್ರಿಕೆಟ್ ಆಟದ ವೇಳೆ ಗಲಾಟೆ: ಬ್ಯಾಟ್‌ನಿಂದ ಹಲ್ಲೆ, ಜೀವ ಬೆದರಿಕೆ: ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲು

ಬ್ರಹ್ಮಾವರ, ಫೆ.16: ಆಟವಾಡುವ ವಿಚಾರದಲ್ಲಿ ಉಂಟಾದ ವಾಗ್ವಾದ ಗಲಾಟೆಗೆ ತಿರುಗಿ, ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ದೂರುದಾರ ಜೀವನ್ ಶೆಟ್ಟಿ 16.02.2026ರಂದು ಸಂಜೆ ಸುಮಾರು 6:45 ಗಂಟೆಗೆ ಹೊಸೂರು ಗ್ರಾಮದ ಕರ್ಜೆ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಂದಿನಂತೆ ಆಟವಾಡಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಪ್ರಕಾರ, ಆರೋಪಿತ ರಮೇಶ್ ಶೆಟ್ಟಿ ಅವರು ಸ್ಥಳಕ್ಕೆ ಬಂದು, “ನನಗೆ ಆಟವಾಡುವಾಗ ನೀನು ಬಹಳ ತೊಂದರೆ ನೀಡುತ್ತಿದ್ದಿಯಾ” ಎಂದು ಹೇಳಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಕೈಯಲ್ಲಿದ್ದ ಕ್ರಿಕೆಟ್ ಬ್ಯಾಟ್‌ನಿಂದ ಎಡ ಭುಜಕ್ಕೆ ಬಲವಾಗಿ ಹೊಡೆದಿದ್ದಾರೆ. ಪರಿಣಾಮವಾಗಿ ಜೀವನ್ ಶೆಟ್ಟಿ ಅವರು ನೆಲಕ್ಕುರುಳಿದ್ದು, ಬಳಿಕ ಮತ್ತೆ ಬೆನ್ನಿನ ಭಾಗಕ್ಕೂ ಬ್ಯಾಟ್‌ನಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಇದರ ಜೊತೆಗೆ, ಕೈಯನ್ನು ತುಂಡು ಮಾಡುತ್ತೇನೆ ಎಂದು ಬೆದರಿಕೆ ಹಾಕಿ ಬ್ಯಾಟ್ ಎತ್ತಿ ಹೊಡೆಯಲು ಯತ್ನಿಸಿದ್ದು, ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಮುಂದೆಯಾದರೂ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 35/2026ರಡಿ BNS ಕಲಂ 118(1), 126(2), 352, 351(2)(3) ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.