

ಡೈಲಿ ವಾರ್ತೆ: ಫೆ./19//2026

ಅಂಬಾಗಿಲು – ಕಲ್ಸಂಕ ರಸ್ತೆಯಲ್ಲಿ ಬೈಕ್ ಅಪಘಾತ, ಓರ್ವ ಸಾವು

ಉಡುಪಿ, ಫೆ.18: ತಾಲೂಕಿನ ಶಿವಳ್ಳಿ ಗ್ರಾಮದ ಅಂಬಾಗಿಲು ಪೆರಂಪಳ್ಳಿ ಕ್ರಾಸ್ ಸಮೀಪದ ನ್ಯೂ ಜಯಲಕ್ಷ್ಮೀ ಸ್ಟೀಲ್ಸ್ ಎದುರುಗಡೆ ಹಾದು ಹೋಗುವ ಅಂಬಾಗಿಲು – ಕಲ್ಸಂಕ ಸಾರ್ವಜನಿಕ ರಸ್ತೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಬ್ಬ ಬೈಕ್ ಸವಾರ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಫೆ.18ರಂದು ರಾತ್ರಿ ಸುಮಾರು 11.30 ಗಂಟೆಗೆ ಸಂದೀಪ್ ಎಂಬಾತನು ಬೈಕನ್ನು ಏಕಮುಖ ಸಂಚಾರ ವ್ಯವಸ್ಥೆ ಇರುವ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ, ಕಲ್ಸಂಕ ಕಡೆಯಿಂದ ಅಂಬಾಗಿಲು ಕಡೆಗೆ ದುಡುಕು ಹಾಗೂ ನಿರ್ಲಕ್ಷ್ಯದಿಂದ ಸವಾರಿ ಮಾಡಿಕೊಂಡು ಬಂದಿದ್ದಾನೆ ಎನ್ನಲಾಗಿದೆ. ಈ ವೇಳೆ ಅಂಬಾಗಿಲು ಕಡೆಯಿಂದ ಕಲ್ಸಂಕ ಕಡೆಗೆ ಸಾಗುತ್ತಿದ್ದ ದೇವೇಂದ್ರ ಶೆಣೈ ಅವರು ಸವಾರಿ ಮಾಡುತ್ತಿದ್ದ ಬೈಕ್ ಗೆ
ಮುಖಾಮುಖಿ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ ಸಂದೀಪ್ ತಲೆಗೆ ಗಂಭೀರ ಗಾಯಗೊಂಡು ಸ್ಥಳೀಯರು ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 12.08ಕ್ಕೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಗಾಯಗೊಂಡ ದೇವೇಂದ್ರ ಶೆಣೈ ಅವರು ಎಡ ಕಾಲಿಗೆ ಜಖಂ ಹೊಂದಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಧನುಷ್ ಡಿ. ನಾಯ್ಕ್ (21) ಅವರು ನೀಡಿದ ದೂರಿನ ಮೇರೆಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 17/2026ರಂತೆ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 281, 125(a), 106(1) ಹಾಗೂ ಐಎಂವಿ ಕಾಯ್ದೆಯ ಕಲಂ 218 ಮತ್ತು 177 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.