ಡೈಲಿ ವಾರ್ತೆ: ಫೆ./20/2026

ಮೈಸೂರು ಮುಡಾ ಪ್ರಕರಣ: ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನ

ಮೈಸೂರು/ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರ್‌ಟಿಐ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಮುಡಾದ ಮಾಜಿ ಆಯುಕ್ತರಾದ ಡಿ . ಬಿ . ನಟೇಶ್ ಅವರು ನೀಡಿದ ದೂರಿನ ಮೇರೆಗೆ ಈ ಬಂಧನ ನಡೆದಿದೆ. ಇತ್ತೀಚೆಗೆ ಸ್ನೇಹಮಯಿ ಕೃಷ್ಣ ಅವರು ನಟೇಶ್ ವಿರುದ್ಧ ಗಂಭೀರ ಆರೋಪಗಳನ್ನು ಸಾರ್ವಜನಿಕವಾಗಿ ಹೊರಹಾಕಿದ್ದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸುಮಾರು ಒಂದು ಕೋಟಿ ಐವತ್ತು ಲಕ್ಷ ರೂಪಾಯಿ ಲಂಚ ನೀಡಿ ಮುಂಬಡ್ತಿ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದರು.

ಈ ಆರೋಪಗಳನ್ನು ಖಂಡಿಸಿದ ನಟೇಶ್, ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸುವಂತೆ ಪೊಲೀಸ್ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರು ಸೈಬರ್ ಪೊಲೀಸರು ತನಿಖೆ ಮುಂದುವರಿಸಿ ಇಂದು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮುಂದಿನ ಕ್ರಮಗಳ ಕುರಿತು ಪೊಲೀಸರು ಅಧಿಕೃತ ಮಾಹಿತಿ ನೀಡುವ ನಿರೀಕ್ಷೆಯಿದೆ.