

ಡೈಲಿ ವಾರ್ತೆ: ಫೆ./20/2026

ಬ್ರಹ್ಮಾವರ| ಆರೂರು ಕ್ರಾಸ್ ಬಳಿ ಸ್ಕೂಟರ್ ಗೆ ಗೂಡ್ಸ್ ವಾಹನ ಡಿಕ್ಕಿ – ಸವಾರ ಮೃತ್ಯು

ಬ್ರಹ್ಮಾವರ, ಫೆ.20: ತಾಲ್ಲೂಕಿನ ಕುಂಜಾಲಿನ ಆರೂರು ಕ್ರಾಸ್ ಸಮೀಪ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಮೃತರನ್ನು ಶೇಖರ್ ಟಿ. ಕುಲಾಲ್ ಎಂದು ಗುರುತಿಸಲಾಗಿದೆ.
ಅವರು ಇಂದು ಬೆಳಿಗ್ಗೆ ತಮ್ಮ ಸ್ಕೂಟರ್‌ನಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದ ವೇಳೆ, ಪೇತ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಸಾಗುತ್ತಿದ್ದ ಗೂಡ್ಸ್ ವಾಹನ ಅತಿವೇಗವಾಗಿ ಬಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದ ಪರಿಣಾಮ ಶೇಖರ್ ಕುಲಾಲ್ ಅವರ ತಲೆ ಮತ್ತು ಕೈಗೆ ತೀವ್ರ ಗಾಯಗಳಾಗಿದ್ದು, ತಕ್ಷಣ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಪರಿಶೀಲಿಸಿದಾಗ ಅವರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನೆ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.