ಡೈಲಿ ವಾರ್ತೆ: ಫೆ./20/2026

ಬಡ್ನಿ ಕ್ಲಸ್ಟರ್‌ನಲ್ಲಿ ‘FLN ಕಲಿಕಾ ಹಬ್ಬ’ ಸಂಭ್ರಮ – ಬುನಾದಿ ಸಾಕ್ಷರತೆಗೆ ಬಲ, ಮಕ್ಕಳ ಪ್ರತಿಭೆಗೆ ವೇದಿಕೆ

ಶಿರಹಟ್ಟಿ: ಕಲಿಕೆಯಲ್ಲಿ ನಿಧಾನಗತಿಯಿರುವ ಮಕ್ಕಳಿಗೂ ಶೈಕ್ಷಣಿಕ ವರ್ಷದುದ್ದಕ್ಕೂ ವಿಶೇಷ ವಿಧಾನಗಳ ಮೂಲಕ ಬುನಾದಿ ಸಾಕ್ಷರತೆ ಮತ್ತು ಸಂಖ್ಯೆ ಜ್ಞಾನದ ಕಲಿಕಾ ಫಲಗಳನ್ನು ಸಾಧಿಸುವುದು ಸಾಧ್ಯ. ಆ ಸಾಧನೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದರ ಜೊತೆಗೆ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವೇ ‘FLN ಕಲಿಕಾ ಹಬ್ಬ’ ಎಂದು ಶಿರಹಟ್ಟಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ನಾಣಿಕಿ ನಾಯ್ಕ ಹೇಳಿದರು.

ಅವರು ಫು ಬಡ್ನಿ ಕ್ಲಸ್ಟರ್ ಮಟ್ಟದ ‘FLN ಕಲಿಕಾ ಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಕನಿಷ್ಠ ಕಲಿಕಾ ಫಲಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಅವರು ತಿಳಿಸಿದರು.

ಫು ಬಡ್ನಿ ಕ್ಲಸ್ಟರ್ ಸಿಆರ್ಪಿ ಗಿರೀಶ ನೇಕಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮೂಹದ ಎಲ್ಲಾ ಶಿಕ್ಷಕರ ಸಹಕಾರದಿಂದ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ ಮಾತನಾಡಿ, ‘FLN ಕಲಿಕಾ ಹಬ್ಬ’ವನ್ನು ವಿಜೃಂಭಣೆಯಿಂದ ಸಂಘಟಿಸಿರುವುದು ಶ್ಲಾಘನೀಯ. ಶಿಕ್ಷಕರ ಸೃಜನಶೀಲತೆ ಹಾಗೂ ಉತ್ಸಾಹ ಮೆಚ್ಚುವಂತದ್ದು ಎಂದರು.

ಮಕ್ಕಳ ಕಲಿಕೆಯನ್ನು ನಿಷ್ಪಕ್ಷಪಾತವಾಗಿ ಮೌಲ್ಯಮಾಪನ ಮಾಡಲು ಬೇರೆ ಕ್ಲಸ್ಟರ್ ಶಿಕ್ಷಕರನ್ನು ನಿರ್ಣಾಯಕರಾಗಿ ಆಹ್ವಾನಿಸಿರುವುದು ಪ್ರಶಂಸನೀಯ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರು ನೇಕಾರ ಹೇಳಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಈಶ್ವರ್ ಮೆಡ್ಲೇರಿ ಮಾತನಾಡಿ, ಪ್ರತಿ ಮಗು ಕನಿಷ್ಠ ಕಲಿಕಾ ಫಲಗಳನ್ನು ಸಾಧಿಸುವುದು ಮುಖ್ಯ ಗುರಿ. ಯಾವುದೇ ಮಗು ಕಲಿಕೆಯಲ್ಲಿ ಹಿಂದೆ ಉಳಿಯದಂತೆ ಶಿಕ್ಷಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಭರಮಪ್ಪ ಹಳ್ಳಿಗೊರವರ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್. ಭಜಂತ್ರಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಮೇಲಿನಮನಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೀಣಾ ಅಕ್ಕಿ, ಗ್ರಾಮ ಹಿರಿಯ ನಾಗಪ್ಪ ಮೂಕಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಬಡ್ನಿ ಕ್ಲಸ್ಟರ್‌ನ 9 ಸರಕಾರಿ ಶಾಲೆಗಳ ಸುಮಾರು 100ಕ್ಕೂ ಹೆಚ್ಚು ಮಕ್ಕಳು ಕಲಿಕಾ ಹಬ್ಬದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. 1ರಿಂದ 5ನೇ ತರಗತಿ ಮಕ್ಕಳಿಗೆ ಏಳು ವಲಯಗಳಲ್ಲಿ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮವನ್ನು ರಾಘವೇಂದ್ರ ಈಳಿಗೇರ ನಿರೂಪಿಸಿದರು. ಪ್ರಧಾನ ಗುರು ಎ.ಎಂ. ಗುತ್ತಲ ಸ್ವಾಗತಿಸಿದರು. ಗಂಗಪ್ಪ ಸೂರಣಗಿ ವಂದಿಸಿದರು.