

ಡೈಲಿ ವಾರ್ತೆ: ಫೆ./20/2026

ಮಲ್ಪೆ| ಖಾರದ ಪುಡಿ ಎರಚಿ ಮೀನು ವ್ಯಾಪಾರಿಯಿಂದ ₹6 ಲಕ್ಷ ಮೌಲ್ಯದ ಚಿನ್ನದ ಸರ ದರೋಡೆ – ಮಲ್ಪೆ ಠಾಣೆಯಲ್ಲಿ ದೂರು ದಾಖಲು

ಮಲ್ಪೆ, ಫೆ.20: ಮಲ್ಪೆ ಬಂದರಿನಲ್ಲಿ ಖಾರದ ಪುಡಿ ಎರಚಿ ಮೀನು ವ್ಯಾಪಾರಿಯೊಬ್ಬರ ಮೇಲೆ ದಾಳಿ ನಡೆಸಿ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಬಡಾನಿಡಿಯೂರು ಗ್ರಾಮದ ದಯಾನಂದ ಕುಂದರ್ (61) ಅವರು ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದು, ಎಂದಿನಂತೆ ಫೆ.20ರಂದು ಬೆಳಿಗ್ಗೆ 3 ಗಂಟೆಗೆ ಕೆಲಸಕ್ಕೆ ತೆರಳಿದ್ದರು.
ಬೆಳಿಗ್ಗೆ 4.30ರ ಸುಮಾರಿಗೆ ಶೌಚಾಲಯಕ್ಕೆ ತೆರಳಿ ವಾಪಾಸು ಬಂದರು ಕಡೆಗೆ ಬರುತ್ತಿದ್ದ ವೇಳೆ ಸಾಹುಕಾರ್ ಬಾರ್ ಸಮೀಪ ಘಟನೆ ನಡೆದಿದೆ.
ಈ ವೇಳೆ ಒಬ್ಬ ಆರೋಪಿ ಮೀನಿನ ಬಗ್ಗೆ ವಿಚಾರಿಸುವ ನೆಪದಲ್ಲಿ ದಯಾನಂದರ ಬಳಿ ಬಂದು, ಸುಲಿಗೆ ಮಾಡುವ ಉದ್ದೇಶದಿಂದ ಅವರ ಮುಖಕ್ಕೆ ಖಾರದ ಪುಡಿ ಎರಚಿದ್ದಾನೆ. ಬಳಿಕ ಅವರನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದು, ಇನ್ನಿಬ್ಬರು ಆರೋಪಿಗಳು ಕೂಡ ಸೇರಿಕೊಂಡು ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ನೀಡುವಂತೆ ಬೆದರಿಕೆ ಹಾಕಿದ್ದಾರೆ.
ದಯಾನಂದರು ಸರ ನೀಡಲು ನಿರಾಕರಿಸಿದಾಗ, ಆರೋಪಿಗಳು ಮುಖ ಹಾಗೂ ಬೆನ್ನಿಗೆ ಹಲ್ಲೆ ನಡೆಸಿ, ಅಂದಾಜು 6 ಪವನ್ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಅಲ್ಲದೆ, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೆ ಜೀವಕ್ಕೆ ಅಪಾಯ ಉಂಟುಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 309(6), 351(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.