

ಡೈಲಿ ವಾರ್ತೆ: ಫೆ./20/2026

ಲಕ್ಕುಂಡಿ ‘ಚಿನ್ನದ ನಿಧಿ’ ರಹಸ್ಯ ಬಯಲು: ನಕಲಿ ಬಿಸ್ಕೆಟ್‌ಗಳಿಂದ 22 ಲಕ್ಷ ಸುಲಿಗೆ – ಖತರ್ನಾಕ್ ಮೌಲ್ವಿ ಬಂಧನ

ಗದಗ, ಫೆಬ್ರವರಿ 20: ಐತಿಹಾಸಿಕ ಹಿನ್ನೆಲೆಯುಳ್ಳ ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿ ಸಿಕ್ಕಿರುವ ಸುದ್ದಿಯ ಬೆನ್ನಲ್ಲೇ, ಹಲವು ವರ್ಷಗಳ ಹಿಂದಿನ ವಂಚನೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
2022ರಲ್ಲಿ ನಿಧಿ ಶೋಧದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ನಡೆದಿದ್ದ ಪ್ರಕರಣವನ್ನು ಪೊಲೀಸರು ಮರುತೆರೆದು, ಇದೀಗ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬದ ಮನೆಯ ಪಾಯ ಮುಚ್ಚುವ ವೇಳೆ 455 ಗ್ರಾಂ ಚಿನ್ನ ಪತ್ತೆಯಾದ ಘಟನೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಈ ಬೆಳವಣಿಗೆಯೊಂದಿಗೆ 2022ರಲ್ಲಿ ದಾಖಲಾಗಿದ್ದ ಹಳೆ ದೂರು ಮತ್ತೆ ಚರ್ಚೆಗೆ ಬಂದಿದೆ.
ಧಾರವಾಡ ನಿವಾಸಿ ಬಸೀರಾಬೇಗಂ ಅವರು ನಿಧಿ ಆಸೆ ತೋರಿಸಿ ವಂಚನೆ ಮಾಡಲಾಗಿದೆ ಎಂದು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಅಂದು ಪ್ರಕರಣ ಗಂಭೀರವಾಗಿ ಪರಿಗಣನೆಯಾಗಿರಲಿಲ್ಲ ಎನ್ನಲಾಗಿದೆ.
ಈ ನಡುವೆ, ಫೆಬ್ರವರಿ 11, 2026ರಂದು ಸಮಾಜ ಸೇವಕ ಪೀರಸಾಬ್ ಗೌತಾಳ ಅವರು ಸರ್ಕಾರಕ್ಕೆ ಸೇರಿದ ನಿಧಿಯನ್ನು ಕೆಲವರು ತಮ್ಮದಾಗಿಸಿಕೊಂಡಿದ್ದಾರೆ ಎಂದು ದೂರು ಸಲ್ಲಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದರು.
ತನಿಖೆಯಲ್ಲಿ ಉತ್ತರಾಖಂಡ ಮೂಲದ ಹಜರತ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ‘ಚಿನ್ನದ ನಿಧಿ’ ಎಂದದ್ದು ನಕಲಿ ಬಂಗಾರದ ಬಿಸ್ಕೆಟ್‌ಗಳಾಗಿದ್ದುದು ಬಹಿರಂಗವಾಗಿದೆ.
2022ರಲ್ಲಿ ಗದಗ ನಗರದಲ್ಲಿ ಹಂಡೆ ಖರೀದಿ ಮಾಡಿ, ಮತ್ತೊಂದು ಅಂಗಡಿಯಲ್ಲಿ ಗೋಲ್ಡ್ ಬಣ್ಣದ ನಕಲಿ ಬಿಸ್ಕೆಟ್‌ಗಳನ್ನು ಪಡೆದು, ಅವನ್ನು ಜಮೀನಿನಲ್ಲಿ ಹೂತು ‘ನಿಧಿ ಶೋಧ’ ನಾಟಕವಾಡಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಈ ದೃಶ್ಯಗಳನ್ನು ವಿಡಿಯೋ ಮಾಡಿ ಹಲವರಿಗೆ ತೋರಿಸಿ ನಂಬಿಕೆ ಹುಟ್ಟಿಸಿ ಹಣ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ.
ಪ್ರಮುಖ ಆರೋಪಿ ಹಜರತ್, ಧಾರವಾಡದ ಬಸೀರಾಬೇಗಂ ಸೇರಿದಂತೆ ಹಲವು ಮಂದಿಗೆ ನಿಧಿ ಸಿಕ್ಕರೆ ಅಪಾರ ಲಾಭ ಸಿಗುತ್ತದೆ ಎಂದು ನಂಬಿಸಿ ಸುಮಾರು 22 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.
ಲಕ್ಕುಂಡಿ ಗ್ರಾಮದ ಸಣ್ಣ ಬಸಪ್ಪ ಹಾಗೂ ದೊಡ್ಡ ಬಸಪ್ಪ ಅವರ ಜಮೀನಿನಲ್ಲಿ ನಿಧಿ ಸಿಕ್ಕಂತೆ ನಾಟಕವಾಡಿ, 20 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದ ಘಟನೆ ಕೂಡ ತನಿಖೆಯಲ್ಲಿ ಬಹಿರಂಗವಾಗಿದೆ. ಬಳಿಕ ನಕಲಿ ಚಿನ್ನವನ್ನು ಕಾಲಿನಿಂದ ಒದ್ದಾಗ ಮಣ್ಣಾಗುತ್ತದೆ ಎಂದು ತೋರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ದೆಹಲಿ ಹಾಗೂ ಧಾರವಾಡದ ಮಹಿಳೆಯರು ಸೇರಿದಂತೆ ಕನಿಷ್ಠ ಎಂಟು ಮಂದಿಗೆ ಇದೇ ರೀತಿ ವಂಚನೆ ನಡೆಸಿರುವುದು ಪತ್ತೆಯಾಗಿದೆ.
ಒಟ್ಟಿನಲ್ಲಿ, ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಚಿನ್ನದ ನಿಧಿ ಘಟನೆ ಹಳೆ ವಂಚನೆ ಪ್ರಕರಣಕ್ಕೆ ಮರುಜೀವ ನೀಡಿದ್ದು, ಇದೀಗ ನಕಲಿ ನಿಧಿ ಜಾಲದ ಅಸಲಿ ಮುಖವಾಡ ಬಯಲಾಗಿದೆ. ಪ್ರಕರಣದ ಹೆಚ್ಚಿನ ಆಯಾಮಗಳನ್ನು ಪೊಲೀಸರು ಇನ್ನಷ್ಟು ತನಿಖೆ ಮೂಲಕ ಬಹಿರಂಗಪಡಿಸುವ ನಿರೀಕ್ಷೆಯಿದೆ.