ಡೈಲಿ ವಾರ್ತೆ: ಫೆ./21/2026

ಶಿರ್ವ| ಬಾಡಿಗೆ ಮನೆ ನೆಪದಲ್ಲಿ ಬಂದ ಯುವಕರಿಂದ ವೃದ್ದೆಯ ಚಿನ್ನದ ಸರ ಕಸಿದು ಪರಾರಿ

ಉಡುಪಿ: ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ಮೂವರು ಯುವಕರ ತಂಡವೊಂದು ವೃದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾದ ಘಟನೆ ಶನಿವಾರ ಬೆಳಗ್ಗೆ ಶಂಕರಪುರದಲ್ಲಿ ನಡೆದಿದೆ.

ಹೆಲೆನ್ ಡಿಸೋಜಾ (70) ಸರ ಕಳೆದುಕೊಂಡ ವೃದ್ದ ಮಹಿಳೆ ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ ಸುಮಾರು 10 ಗಂಟೆಯ ವೇಳೆ ಈಕೆ ಮನೆಯಲ್ಲಿ ಒಬ್ಬರೇ ಇದ್ದಾಗ, ಮೂವರು ಯುವಕರು ಬಾಡಿಗೆ ಮನೆ ವಿಚಾರಿಸಲು ಬಂದಿದ್ದಾರೆ. ಅಕ್ಕಪಕ್ಕದ ಮನೆಗಳ ಬಗ್ಗೆ ವಿಚಾರಿಸಿದ ಅವರು, ಬಳಿಕ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಕೇಳಿ ಬರೆಯುವ ನೆಪದಲ್ಲಿ ಸಮೀಪಕ್ಕೆ ಬಂದಿದ್ದಾರೆ.

ಈ ವೇಳೆ ಒಬ್ಬ ಯುವಕ ಮಹಿಳೆಯ ಕೊರಳಲ್ಲಿದ್ದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಏಕಾಏಕಿ ಕಸಿದು ಮನೆಯ ಕಂಪೌಂಡ್ ಹಾರಿದ್ದಾನೆ. ಹೊರಗಡೆ ಕಾಯುತ್ತಿದ್ದ ಉಳಿದ ಇಬ್ಬರು ಆರೋಪಿಗಳೊಂದಿಗೆ ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಶಿರ್ವ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.