ಡೈಲಿ ವಾರ್ತೆ: ಫೆ./21/2026

ಲೋಕಾಯುಕ್ತ ಪ್ರಕರಣಕ್ಕೆ ತಿರುವು: ಸಾಕ್ಷಿದಾರರಿಗೆ ಬೆದರಿಕೆ ಆರೋಪ, ಕುಂದಾಪುರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು!

ಕುಂದಾಪುರ: ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ಉಡುಪಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯ್ಕ ಎಂ.ಎನ್ (43) ಅವರ ದೂರಿನ ಮೇರೆಗೆ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ.

ಸಾಕ್ಷಿದಾರರಿಗೆ ಬೆದರಿಕೆ ಹಾಕಿ ನೋಟರಿ ಪ್ರಮಾಣ ಪತ್ರ ಕಳುಹಿಸಿದ ಆರೋಪದ ಹಿನ್ನೆಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ದಿನಾಂಕ 22/01/2025 ರಂದು ಮಹಮ್ಮದ್ ಹನೀಪ್ ಎಂ.ವಿ ಅವರ ದೂರಿನ ಮೇರೆಗೆ ಠಾಣಾ ಅಪರಾಧ ಕ್ರಮಾಂಕ 01/2025ರಂತೆ ಭ್ರಷ್ಟಾಚಾರ ಪ್ರತಿಬಂಧ ಕಾಯಿದೆಯ ಕಲಂ 7(a) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಗಂಗೊಳ್ಳಿ ಗ್ರಾಮ ಪಂಚಾಯತ್ ಪಿಡಿಓ ಹೆಚ್. ಉಮಾಶಂಕರ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಶೇಖರ್ ಜಿ ಅವರನ್ನು 18/01/2025 ರಂದು ದಸ್ತಗಿರಿ ಮಾಡಲಾಗಿತ್ತು.

ದಸ್ತಗಿರಿಯ ವೇಳೆ ಪಂಚಾಯತುದಾರರಾಗಿ ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ರವಿಕುಮಾರ್ ಹುಕ್ಕೇರಿ ಹಾಗೂ ತಾಲೂಕು ಪಂಚಾಯತ್ ಕಚೇರಿ ವ್ಯವಸ್ಥಾಪಕ ಶ್ರೀ ರಾಮಚಂದ್ರ ಮಯ್ಯ ಉಪಸ್ಥಿತರಿದ್ದರು. ಅವರಿಗೆ ಆಡಿಯೋ ಸಂಭಾಷಣೆ ಕೇಳಿಸಲಾಗಿದ್ದು, ಅದರಲ್ಲಿ ಕೇಳಿಬಂದ ಧ್ವನಿ ಉಮಾಶಂಕರ್ ಹಾಗೂ ಶೇಖರ್ ಅವರದ್ದೇ ಎಂದು ಗುರುತಿಸಿ ಪಂಚನಾಮೆಗೆ ಸಹಿ ಮಾಡಲಾಗಿದೆ ಎಂದು ದಾಖಲಾಗಿತ್ತು.

ಆದರೆ, ಬಳಿಕ 12/03/2025 ರಂದು ಪಂಚನಾಮೆಯ ಸಾಕ್ಷಿದಾರರು, ಆಪಾದಿತ ಉಮಾಶಂಕರ್ ಅವರು ತಮ್ಮ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ, ಛಾಪಾ ಕಾಗದದಲ್ಲಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ನೋಟರಿ ಪ್ರಮಾಣ ಪತ್ರವನ್ನು ಅಂಚೆ ಮೂಲಕ ಕಳುಹಿಸಿರುವುದಾಗಿ ತಿಳಿದು ಬಂದಿದೆ.

ಇಲಾಖಾ ವಿಚಾರಣೆಯ ವೇಳೆ ಸಹ ಆಪಾದಿತರು ಬೆದರಿಕೆ ಹಾಕಿದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನ ಆಧಾರದಲ್ಲಿ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2026 ರಂತೆ BNS ಕಲಂ 232 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

ಪ್ರಕರಣವು ಭ್ರಷ್ಟಾಚಾರ ತನಿಖೆಗೆ ಸಂಬಂಧಿಸಿದಂತೆ ಸಾಕ್ಷಿದಾರರ ಮೇಲೆ ಒತ್ತಡ ಹೇರುವ ಗಂಭೀರ ಆರೋಪಗಳಿಗೆ ಕಾರಣವಾಗಿದ್ದು, ಮುಂದಿನ ಕಾನೂನು ಕ್ರಮಗಳತ್ತ ಗಮನ ಸೆಳೆದಿದೆ.