

ಡೈಲಿ ವಾರ್ತೆ: ಫೆ./21/2026

ಶಿವಾಜಿ ಜಯಂತಿ ಸಂಭ್ರಮದಲ್ಲಿ ಕಲ್ಲು,ಕಟ್ಟಿಗೆಯಿಂದ ಹೊಡೆದಾಟ: ಕಲಬುರಗಿಯಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆ

ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಶಿವಾಜಿ ಜಯಂತಿ ಆಚರಣೆ ವೇಳೆ ಎರಡು ಸಮುದಾಯಗಳ ನಡುವೆ ತೀವ್ರ ಘರ್ಷಣೆ ಸಂಭವಿಸಿ ಮೂರ್ನಾಲ್ಕು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.
ರಾವೂರ್ ಗ್ರಾಮದ ಗೋಕುಲ ನಗರದ ಗಣೇಶ್ ಕಟ್ಟೆಯ ಮೇಲೆ ಶಿವಾಜಿ ಮಹಾರಾಜ ಅವರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಶಿವಾಜಿ ಜಯಂತಿಯನ್ನು ಆಚರಿಸಲಾಗುತ್ತಿತ್ತು.
ಈ ವೇಳೆ ಡಿಜೆ ಸೌಂಡ್ ವ್ಯವಸ್ಥೆಯೊಂದಿಗೆ ಯುವಕರು ನೃತ್ಯ ಮಾಡುತ್ತಿದ್ದಾಗ, ಇನ್ನೊಂದು ಸಮುದಾಯದವರು ಸೌಂಡ್ ಕಡಿಮೆ ಮಾಡುವಂತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವಾಗ್ವಾದ ಕ್ಷಣಾರ್ಧದಲ್ಲಿ ಹಿಂಸಾತ್ಮಕ ರೂಪ ಪಡೆದುಕೊಂಡು, ಎರಡು ಸಮುದಾಯಗಳವರ ನಡುವೆ ಕಟ್ಟಿಗೆ ಹಾಗೂ ಕಲ್ಲುಗಳಿಂದ ಹೊಡೆದಾಟ ನಡೆದಿದೆ.
ಘಟನೆಯಲ್ಲಿ ಮೂರ್ನಾಲ್ಕು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ನಂತರ ಹಿರಿಯರ ಮಧ್ಯಸ್ಥಿಕೆಯಿಂದ ಎರಡು ಸಮುದಾಯಗಳ ನಡುವೆ ಸಂಧಾನವಾಗಿದ್ದು, ಪರಸ್ಪರ ಒಪ್ಪಂದದ ಹಿನ್ನೆಲೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.
ಗ್ರಾಮದಲ್ಲಿ ತಾತ್ಕಾಲಿಕವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದರೂ, ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಕಟ್ಟಿ ನಿಟ್ಟಿದ್ದಾರೆ.