ಡೈಲಿ ವಾರ್ತೆ: ಫೆ./21/2026

ಮಲ್ಪೆ ಬಂದರಿನಲ್ಲಿ ಖಾರದ ಪುಡಿ ಎರಚಿ 6 ಲಕ್ಷ ಮೌಲ್ಯದ ಚಿನ್ನದ ಸರ ಸುಲಿಗೆ ಪ್ರಕರಣ: ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಓರ್ವ ಆರೋಪಿಯ ಬಂಧನ

ಉಡುಪಿ, ಫೆ.20: ಮಲ್ಪೆ ಬಂದರಿನ ಪ್ರದೇಶದಲ್ಲಿ ಬೆಳಗಿನ ಜಾವ ನಡೆದ ಸಂಚಲನಕಾರಿ ಸುಲಿಗೆ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದು, ಸುಲಿಗೆ ಮಾಡಿದ್ದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ದಿನಾಂಕ 20/02/2026ರಂದು ದಯಾನಂದ ಕುಂದರ್ ಅವರು ನೀಡಿದ ದೂರಿನ ಪ್ರಕಾರ, ಅವರು ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರ ಕೆಲಸ ಮಾಡುತ್ತಿದ್ದು, ಎಂದಿನಂತೆ ಬೆಳಿಗ್ಗೆ 03:00 ಗಂಟೆಗೆ ಕೆಲಸಕ್ಕೆ ತೆರಳಿದ್ದರು. ಬೆಳಿಗ್ಗೆ 04:30ರ ಸುಮಾರಿಗೆ ಶೌಚಾಲಯಕ್ಕೆ ತೆರಳಿ, ಬಳಿಕ ಬಂದರು ಕಡೆಗೆ ಮರಳುತ್ತಿದ್ದಾಗ ಸುಮಾರು 04:40ಕ್ಕೆ ಒಬ್ಬ ಆರೋಪಿತನು ಮೀನಿನ ವಿಚಾರ ಕೇಳುವ ನೆಪದಲ್ಲಿ ಅವರ ಬಳಿ ಬಂದು, ಸುಲಿಗೆ ಮಾಡುವ ಉದ್ದೇಶದಿಂದ ಮುಖಕ್ಕೆ ಖಾರದ ಪುಡಿ ಎರಚಿದ್ದಾನೆ.
ನಂತರ ಸ್ವಲ್ಪ ದೂರ ಎಳೆದುಕೊಂಡು ಹೋಗಿ, ಇನ್ನಿಬ್ಬರು ಆರೋಪಿತರೊಂದಿಗೆ ಸೇರಿ ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. ವಿರೋಧ ವ್ಯಕ್ತಪಡಿಸಿದಾಗ ಮೂವರು ಆರೋಪಿತರು ಸೇರಿ ಮುಖ ಹಾಗೂ ಬೆನ್ನಿಗೆ ಹಲ್ಲೆ ನಡೆಸಿ, ಅಂದಾಜು 6 ಲಕ್ಷ ರೂ. ಮೌಲ್ಯದ ಸುಮಾರು 6 ಪವನ್ ಚಿನ್ನದ ಸರವನ್ನು ಕಸಿದುಕೊಂಡು, ಪೊಲೀಸರಿಗೆ ಮಾಹಿತಿ ನೀಡಿದರೆ ಕೊಂದುಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2026ರಂತೆ ಕಲಂ 309(6), 351(2) R/W 3(5) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ತನಿಖೆಯನ್ನು ಬೆಳ್ಳಿಯಪ್ಪ ಪೊಲೀಸ್ ಉಪಾಧೀಕ್ಷಕರು (ಉಡುಪಿ ಉಪವಿಭಾಗ) ಹಾಗೂ ರಾಮಚಂದ್ರ ನಾಯಕ್ ಸಿಪಿಐ (ಮಲ್ಪೆ ವೃತ್ತ) ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಈರಣ್ಣ ಶಿರಗುಂಪಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ. ಮಲ್ಪೆ ಠಾಣೆಯ ಪಿಎಸ್‌ಐ ಹುಸೇನ್ ಸಾಬ್ ಚಪ್ಪರಕರ್ ಹಾಗೂ ಸಿಬ್ಬಂದಿಗಳಾದ ಹೆಚ್‌ಸಿ ಆದರ್ಶ ಮತ್ತು ಪಿಸಿ ಬಸವರಾಜ ಹೈದ್ರಿ ಅವರ ಕಾರ್ಯಾಚರಣೆಯಲ್ಲಿ ಪ್ರಕರಣದ ಓರ್ವ ಆರೋಪಿತನಾದ ಮುತ್ತಣ್ಣ (20), ಶ್ಯಾಮಣ್ಣ ತಾವರಗೆರೆ ಅವರ ಪುತ್ರ, ಮೂಲ ನಿವಾಸಿ ಲಾಯದಹುಣಸಿ ಗ್ರಾಮ, ಕನಕಗಿರಿ ತಾಲೂಕು, ಕೊಪ್ಪಳ ಜಿಲ್ಲೆ (ಪ್ರಸ್ತುತ ಮಲ್ಪೆ ಕೊಳ, ಕೊಡವೂರು ಗ್ರಾಮದಲ್ಲಿ ಬಾಡಿಗೆ ನಿವಾಸಿ) ಇತನನ್ನು 20-02-2026ರಂದು ಸಂಜೆ 20:00 ಗಂಟೆಗೆ ದಸ್ತಗಿರಿ ಮಾಡಲಾಗಿದೆ.

ಬಂಧಿತ ಆರೋಪಿಯಿಂದ ಸುಲಿಗೆ ಮಾಡಿದ 37.570 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಇತರ ಆರೋಪಿತರ ಪತ್ತೆಗೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಬಂದರು ಪ್ರದೇಶದಲ್ಲಿ ನಡೆದ ಈ ಧೈರ್ಯಶಾಲಿ ಕೃತ್ಯ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದ್ದು, ರಾತ್ರಿ ಹಾಗೂ ಬೆಳಗಿನ ಜಾವ ಪೊಲೀಸ್ ಗಸ್ತು ಬಿಗಿಗೊಳಿಸಲಾಗಿದೆ.