

ಡೈಲಿ ವಾರ್ತೆ: ಫೆ./21/2026

11 ಲಕ್ಷ ಲಂಚ ಬೇಡಿಕೆ ಆರೋಪ: ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಪಿಎಗಳೊಂದಿಗೆ ಲೋಕಾಯುಕ್ತ ಬಲೆಗೆ

ಗದಗ, ಫೆ.21: ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಣಿ ಅವರು ಗುತ್ತಿಗೆದಾರನಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
11 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದ್ದು, ಅದರ ಮುಂಗಡವಾಗಿ 5 ಲಕ್ಷ ರೂ. ಕಮಿಷನ್ ಸ್ವೀಕರಿಸುವ ವೇಳೆ ಶಾಸಕ ಹಾಗೂ ಅವರ ಪಿಎಗಳಾದ ಮಂಜುನಾಥ್ ಮತ್ತು ಗುರು ಅವರನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಗುತ್ತಿಗೆದಾರನಿಗೆ ಲಂಚ ನೀಡಲು ಒತ್ತಾಯ:
ಸಣ್ಣ ನೀರಾವರಿ ಇಲಾಖೆಯ ಕ್ಲಾಸ್-1 ಗುತ್ತಿಗೆದಾರ ವಿಜಯ್ ಅವರಿಗೆ ರಸ್ತೆ ಬದಿ ತಡೆಗೋಡೆ ನಿರ್ಮಾಣ ಕಾಮಗಾರಿ ನೀಡಲು 11 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಂದ 5 ಲಕ್ಷ ರೂ. ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಅಲ್ಲದೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಚಂದ್ರು ಲಮಾಣಿಗೆ ಸೇರಿದ್ದೆಂದು ಹೇಳಲಾಗಿರುವ ಬಾಲಾಜಿ ಆಸ್ಪತ್ರೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿರುವುದು ತಿಳಿದು ಬಂದಿದೆ.
‘ಗುತ್ತಿಗೆದಾರರ ಹೋರಾಟಕ್ಕೆ ಜಯ’
ಈ ಕುರಿತು ಪ್ರತಿಕ್ರಿಯೆ ನೀಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್, “ಶಾಸಕರೇ ಇಂತಹ ಕೃತ್ಯಕ್ಕೆ ಇಳಿಯಬಾರದು. ನಾವು ಮಾಡುತ್ತಿದ್ದ ಕಮಿಷನ್ ಆರೋಪಕ್ಕೆ ಇದೀಗ ಸಾಕ್ಷಿ ಸಿಕ್ಕಂತಾಗಿದೆ. ಇದು ಗುತ್ತಿಗೆದಾರರ ಹೋರಾಟಕ್ಕೆ ಸಿಕ್ಕಿರುವ ಜಯ. ದೂರು ನೀಡಿದ ಗುತ್ತಿಗೆದಾರನ ಬೆಂಬಲಕ್ಕೆ ನಮ್ಮ ಸಂಘ ಸದಾ ಇರುತ್ತದೆ” ಎಂದು ಹೇಳಿದ್ದಾರೆ.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡುತ್ತಾ, “ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಮ್ಮ ಪಕ್ಷ ಎಂದಿಗೂ ಲಂಚ ಸ್ವೀಕರಿಸಲು ಹೇಳಿಲ್ಲ. ಪ್ರಕರಣದ ಸತ್ಯಾಸತ್ಯತೆ ಕುರಿತು ಸಮಗ್ರ ಪರಿಶೀಲನೆ ಅಗತ್ಯ” ಎಂದು ತಿಳಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ಪ್ರಕರಣದ ಕುರಿತು ಮುಂದಿನ ವಿಚಾರಣೆ ಮುಂದುವರೆಸಿದ್ದು, ರಾಜಕೀಯ ವಲಯದಲ್ಲಿ ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.