

ಡೈಲಿ ವಾರ್ತೆ: ಫೆ./22/2026

ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್‌ಗೆ ಸಿಎಂ ಸುಳಿವು: 16ರೊಳಗಿನ ವಿದ್ಯಾರ್ಥಿಗಳಿಗೆ ಕಡಿವಾಣ?

ಬೆಂಗಳೂರು, ಫೆ.22: ಬೆಂಗಳೂರಿನಲ್ಲಿ ನಡೆದ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಶಾಲಾ, ಕಾಲೇಜುಗಳಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸುವ ಸಾಧ್ಯತೆಯ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ.
16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ಕುರಿತು ಸಭೆಯಲ್ಲಿ ಕುಲಪತಿಗಳ ಅಭಿಪ್ರಾಯ ಕೇಳಲಾಗಿದ್ದು, ಪ್ರಸ್ತಾಪಕ್ಕೆ ಬಹುತೇಕ ವಿಸಿಗಳಿಂದ ಸಹಮತಿ ವ್ಯಕ್ತವಾಗಿದೆ ಎನ್ನಲಾಗಿದೆ. ಆಸ್ಟ್ರೇಲಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಶಾಲಾ ಮಟ್ಟದಲ್ಲಿ ಮೊಬೈಲ್ ಬಳಕೆಗೆ ನಿಯಂತ್ರಣ ಜಾರಿಯಲ್ಲಿರುವುದನ್ನು ಉಲ್ಲೇಖಿಸಿ, ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಅಗತ್ಯವೆಂದು ಅಭಿಪ್ರಾಯ ವ್ಯಕ್ತವಾಗಿದೆ.
ವಿವಿ ಕ್ಯಾಂಪಸ್‌ಗಳಲ್ಲಿ ಡ್ರಗ್ಸ್ ವಿರುದ್ಧ ಕಠಿಣ ಸೂಚನೆ
ವಿಶ್ವವಿದ್ಯಾಲಯ ಕ್ಯಾಂಪಸ್‌ಗಳು ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಡ್ರಗ್ಸ್ ಒಂದು ದೊಡ್ಡ ಪಿಡುಗಾಗಿದ್ದು, ಕ್ಯಾಂಪಸ್‌ಗಳಲ್ಲಿ ಕಟ್ಟುನಿಟ್ಟಿನ ನಿಗಾ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ವಿಸಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಿದ್ಯಾರ್ಥಿ ಚುನಾವಣೆಗೆ ಮಿಶ್ರ ಪ್ರತಿಕ್ರಿಯೆ
ವಿದ್ಯಾರ್ಥಿ ಸಂಘ ಚುನಾವಣೆಯ ವಿಚಾರದಲ್ಲೂ ಸಿಎಂ ಚರ್ಚೆ ನಡೆಸಿದ್ದು, ಷರತ್ತುಬದ್ಧವಾಗಿ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. “ನಮ್ಮ ಕಾಲದಲ್ಲಿ ಚುನಾವಣೆ ಇತ್ತು. ಅಲ್ಲಿಂದಲೇ ನಾಯಕತ್ವ ಬೆಳೆಯುತ್ತಿತ್ತು. ಚುನಾವಣೆ ಇಲ್ಲದಿದ್ದರೆ ವಿದ್ಯಾರ್ಥಿಗಳು ನಾಯಕರಾಗಿ ಹೇಗೆ ಬೆಳೆಯುತ್ತಾರೆ?” ಎಂದು ಸಿಎಂ ಪ್ರಶ್ನಿಸಿದ್ದಾರೆ.
ಆದರೆ ಬಹುತೇಕ ಕುಲಪತಿಗಳು ಕಾಲೇಜುಗಳಲ್ಲಿ ಚುನಾವಣೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಜವಾಹಾರ್ಲಾಲ್ ನೆಹರು ಯೂನಿವರ್ಸಿಟಿ ಸೇರಿದಂತೆ ಕೆಲ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆ ಸಂದರ್ಭ ಗಲಾಟೆಗಳು ನಡೆದಿರುವುದನ್ನು ಉದಾಹರಿಸಿ, ಪಕ್ಷಾತೀತವಾಗಿ ಚುನಾವಣೆ ನಡೆಸುವುದು ಕಷ್ಟಕರವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ಪ್ರಚಾರಕ್ಕೆ ಹೆಚ್ಚು ಸಮಯ ಬೇಕಾಗುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.
ಈ ನಡುವೆ, ಸರ್ಕಾರ ಶೀಘ್ರದಲ್ಲೇ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದ್ದು, ವಿದ್ಯಾರ್ಥಿ ಸಮುದಾಯದ ಗಮನ ಈ ನಿರ್ಧಾರದತ್ತ ಕೇಂದ್ರೀಕೃತವಾಗಿದೆ.