ಡೈಲಿ ವಾರ್ತೆ: ಫೆ./23/2026

ಮಕ್ಕಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈಲು ಹಳಿ ಮೇಲೆ ಮಲಗಿ ವೃದ್ಧ ದಂಪತಿ ಆತ್ಮಹತ್ಯೆ

ಹಾಸನ: ಬದುಕು ಕೊಟ್ಟ ತಂದೆ-ತಾಯಿಯನ್ನೇ ಮಕ್ಕಳು ನಿರ್ಲಕ್ಷ್ಯ ಮಾಡಿದ ಪರಿಣಾಮ, ತುತ್ತು ಊಟಕ್ಕೂ ಪರದಾಡುತ್ತಿದ್ದ ವೃದ್ಧ ದಂಪತಿ ರೈಲು ಹಳಿ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಹಾಸನ ನಗರದ ಕರಿಗೌಡ ಕಾಲೊನಿಯಲ್ಲಿ ಬೆಳಕಿಗೆ ಬಂದಿದೆ.

ಡೇನಿಯಲ್ ಮತ್ತು ಅವರ ಪತ್ನಿ ಮೇರಿ ಮೃತ ದಂಪತಿ. ಮೂಲತಃ ಹಾರೇಹೊಸೂರು (ಸೋಮವಾರಪೇಟೆ, ಕೊಡಗು ಜಿಲ್ಲೆ) ನಿವಾಸಿಯಾಗಿದ್ದ ಡೇನಿಯಲ್ ಅವರು ಮೇಸ್ತ್ರಿ ಕೆಲಸ ಮಾಡುತ್ತ ಕುಟುಂಬವನ್ನು ಕಷ್ಟಪಟ್ಟು ಸಾಕಿದ್ದರು. ಐವತ್ತು ವರ್ಷಗಳ ಹಿಂದೆ ಮೇರಿಯನ್ನು ವಿವಾಹವಾಗಿದ್ದ ದಂಪತಿಗೆ ನೆಲ್ಸನ್ ಮತ್ತು ವಿಲ್ಸನ್ ಎಂಬ ಇಬ್ಬರು ಪುತ್ರರು ಇದ್ದರು.

ಡೇನಿಯಲ್ ದುಡಿಮೆ ಮಾಡಿ ಕಾಫಿ ತೋಟ, ಮನೆ ಸೇರಿದಂತೆ ಆಸ್ತಿ ಸಂಪಾದಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವಿವಾಹ ವ್ಯವಸ್ಥೆ ಮಾಡಿ ಕೊಟ್ಟಿದ್ದರು. ಒಬ್ಬ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಮತ್ತೊಬ್ಬ ಪುತ್ರ ಹಾರೇಹೊಸೂರಿನಲ್ಲೇ ಕಾಫಿ ತೋಟ ನೋಡಿಕೊಳ್ಳುತ್ತಿದ್ದ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಬ್ಬರು ಮಕ್ಕಳು ವಯೋವೃದ್ಧ ತಂದೆ-ತಾಯಿಯ ಆರೈಕೆಯಲ್ಲಿ ನಿರ್ಲಕ್ಷ್ಯ ತೋರಿದರೆಂಬ ಆರೋಪ ಕೇಳಿಬಂದಿದೆ. ಸಮಯಕ್ಕೆ ಸರಿಯಾಗಿ ಊಟ ಕೊಡದೆ, ಅನಾರೋಗ್ಯವಾದಾಗ ಚಿಕಿತ್ಸೆ ಕೊಡಿಸದೆ ಮಾನಸಿಕವಾಗಿ ಹಿಂಸಿಸುತ್ತಿದ್ದರೆಂದು ತಿಳಿದುಬಂದಿದೆ.

ಮಕ್ಕಳ ವರ್ತನೆಗೆ ಬೇಸತ್ತ ದಂಪತಿ ಕೆಲ ದಿನಗಳ ಹಿಂದೆ ವಿರಾಜಪೇಟೆಯ ವೃದ್ಧಾಶ್ರಮಕ್ಕೆ ಸೇರಿದ್ದರು. ಆದರೆ ಜೀವನಪೂರ್ತಿ ದುಡಿದು ಮನೆಮಂದಿಯನ್ನು ಸಾಕಿದ ದಂಪತಿಗೆ ವೃದ್ಧಾಶ್ರಮದ ಜೀವನ ಮಾನಸಿಕವಾಗಿ ಭಾರವಾಗಿತ್ತು. ಇದರಿಂದ ಮನೋವ್ಯಥೆಗೆ ಒಳಗಾದ ಅವರು ಮೊನ್ನೆ ವೃದ್ಧಾಶ್ರಮದಿಂದ ಹೊರಟು ಸಾರಿಗೆ ಬಸ್ ಮೂಲಕ ಹಾಸನಕ್ಕೆ ಆಗಮಿಸಿ, ಬಸ್ ನಿಲ್ದಾಣದಲ್ಲಿ ಇಳಿದು ರೈಲು ಹಳಿಯ ಮೇಲೆ ಮಲಗಿ ರೈಲಿಗೆ ಸಿಲುಕಿ ದಾರುಣ ಅಂತ್ಯ ಕಂಡಿದ್ದಾರೆ.

ಮೃತ ದಂಪತಿಯ ಗುರುತು ಪತ್ತೆಯಾದ ನಂತರ ಮಕ್ಕಳಿಗೆ ವಿಷಯ ತಿಳಿಸಲಾಯಿತು. ಆದರೆ ಮೃತದೇಹ ಸ್ವೀಕರಿಸಲು ಅವರು ಹಿಂದೇಟು ಹಾಕಿದರೆಂಬ ಆರೋಪ ಕೇಳಿಬಂದಿದೆ. ಸಂಬಂಧಿಕರು ಮತ್ತು ರೈಲ್ವೆ ಪೊಲೀಸರು ತರಾಟೆಗೆ ತೆಗೆದುಕೊಂಡ ನಂತರ ಶವಾಗಾರಕ್ಕೆ ಬಂದ ಮಕ್ಕಳಲ್ಲಿ ಯಾವುದೇ ಪಶ್ಚಾತ್ತಾಪ ಕಾಣಿಸಲಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ತಂದೆ ಮದ್ಯಪಾನ ಮಾಡುತ್ತಿದ್ದರು, ಮನೆಯಲ್ಲಿ ಜಗಳ ನಡೆಯುತ್ತಿತ್ತು, ಅದಕ್ಕಾಗಿ ಅವರು ಮನೆಬಿಟ್ಟು ಹೋಗಿದ್ದರು ಎಂದು ಮಕ್ಕಳು ಹೇಳಿಕೊಂಡಿದ್ದಾರೆ.

ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸಮಾಜಕ್ಕೆ ಕಳಕಳಿ: ವೃದ್ಧಾಪ್ಯದಲ್ಲಿ ಪಾಲಕರಿಗೆ ಆಧಾರವಾಗಬೇಕಾದ ಮಕ್ಕಳು ನಿರ್ಲಕ್ಷ್ಯ ತೋರಿದರೆ, ಇಂತಹ ದುರಂತಗಳು ಮರುಕಳಿಸುವ ಸಾಧ್ಯತೆ ಇದೆ. ಈ ಘಟನೆ ಸಮಾಜದ ಮನಸ್ಸು ಕದಲಿಸುವಂತೆ ಮಾಡಿದೆ.