

ಡೈಲಿ ವಾರ್ತೆ: ಫೆ./23/2026

ಅಪ್ರಾಪ್ತ ಬಾಲಕನ ಪ್ರಚೋದನಕಾರಿ ಘೋಷಣೆ ವಿಡಿಯೋ ಶೇರ್ ಮಾಡಿದರೆ ಕಾನೂನು ಕ್ರಮ: ಉಡುಪಿ ಜಿಲ್ಲಾ ಪೊಲೀಸರ ಕಠಿಣ ಎಚ್ಚರಿಕೆ

ಉಡುಪಿ: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೇರ್ ಡ್ರೆಸ್ ಅಂಗಡಿಯೊಂದರಲ್ಲಿ ಬಿಹಾರ ಮೂಲದ 11 ವರ್ಷದ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆ ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಮಹತ್ವದ ಸೂಚನೆ ನೀಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಪ್ರಾಪ್ತ ವಯಸ್ಕನಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ, ವಿಡಿಯೋವನ್ನು ಯಾವುದೇ ರೀತಿಯಲ್ಲಿ ಶೇರ್ ಮಾಡುವುದು, ಪೋಸ್ಟ್ ಮಾಡುವುದು ಅಥವಾ ಮತ್ತಷ್ಟು ಹರಡುವುದು ಕಾನೂನುಬಾಹಿರವಾಗಿದ್ದು, ಇದು ಗಂಭೀರ ಅಪರಾಧವಾಗಿ ಪರಿಗಣಿಸಲಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ವಿಡಿಯೋವನ್ನು ಶೇರ್ ಮಾಡುವವರ ವಿರುದ್ಧ IT Act, Juvenile Justice Act ಹಾಗೂ BNS Act ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.