

ಡೈಲಿ ವಾರ್ತೆ: ಫೆ./25/2026

100 ರೂ. ಗಾಗಿ ಶುರುವಾದ ಜಗಳ ಚಾಕು ಇರಿತದಿಂದ ಅಂತ್ಯ: ಚಿತ್ರದುರ್ಗದಲ್ಲಿ ಉದ್ವಿಗ್ನ ವಾತಾವರಣ

ಚಿತ್ರದುರ್ಗ, ಫೆ. 25: ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರವಾಗಿ ಉಂಟಾದ ಸಣ್ಣ ಗಲಾಟೆ ಚಾಕು ಇರಿತದ ಘಟನೆಯಾಗಿ ತಿರುಗಿದ ಘಟನೆ ಚಿತ್ರದುರ್ಗ ನಗರದ ಸಂತೆ ಮೈದಾನ ಬಳಿಯಲ್ಲಿ ನಡೆದಿದೆ. ಘಟನೆ ನಂತರ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ಮೊಬೈಲ್ ಅಂಗಡಿ ಮಾಲೀಕ ವಿಕ್ರಮ್ ಚೌದ್ರಿ ಅವರ ಅಂಗಡಿಗೆ ಯುವಕನೊಬ್ಬ ಸ್ಕ್ರೀನ್ ಗಾರ್ಡ್ ಖರೀದಿಸಲು ಬಂದಿದ್ದಾನೆ. ಖರೀದಿಸಿದ ಸ್ಕ್ರೀನ್ ಗಾರ್ಡ್ ಬದಲಾಯಿಸಲು ಕೇಳಿದ ವೇಳೆ, ಬೇರೆ ಬ್ರ್ಯಾಂಡ್‌ಗೆ 100 ರೂಪಾಯಿ ಹೆಚ್ಚುವರಿ ಹಣ ಕೇಳಲಾಗಿದೆ. ಇದರಿಂದ ಉಭಯರ ನಡುವೆ ವಾಗ್ವಾದ ಶುರುವಾಗಿ, ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಈ ವೇಳೆ ಸಿಟ್ಟಿಗೆದ್ದ ಯುವಕ, ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗಾಯಗೊಂಡ ವಿಕ್ರಮ್ ಚೌದ್ರಿ ಅವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾ ಆಸ್ಪತ್ರೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ರಸ್ತೆ ತಡೆ ನಡೆಸಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಯನ್ನು ಬಂಧಿಸದಿದ್ದಲ್ಲಿ ಫೆಬ್ರವರಿ 26ರಂದು ಚಿತ್ರದುರ್ಗ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹೆಚ್ಚುವರಿ ಭದ್ರತೆ ಒದಗಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದು, ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಒಟ್ಟಾರೆ, ಕೇವಲ 100 ರೂಪಾಯಿ ವಿಚಾರವಾಗಿ ಆರಂಭವಾದ ಸಣ್ಣ ಜಗಳ, ಇದೀಗ ನಗರದಲ್ಲಿ ಉದ್ವಿಗ್ನತೆಗೆ ಕಾರಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.