ಡೈಲಿ ವಾರ್ತೆ: ಫೆ./27/2026

ಮಲ್ಪೆ ಬಂದರಿನಲ್ಲಿ ಮೀನು ಏಲಂ ವಿಚಾರಕ್ಕೆ ಮಾರಣಾಂತಿಕ ಹಲ್ಲೆ: ಆರೋಪಿಯ ವಿರುದ್ಧ ಪ್ರಕರಣ ದಾಖಲು

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಬಂದರುನಲ್ಲಿ ಮೀನು ಏಲಂ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಹಲ್ಲೆಗೆ ಒಳಗಾದವರನ್ನು ಅಂಬಲಪಾಡಿ ನಿವಾಸಿ ಶೇಕ್ ಅಯ್ಯುಬ್ (52) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶೇಕ್ ಅಯ್ಯುಬ್ ಮಲ್ಪೆ ಬಂದರಿನಲ್ಲಿ ಮೀನು ಏಲಂ ಮಾಡುವ ಕೆಲಸ ಮಾಡಿಕೊಂಡಿದ್ದು, ಗುರುವಾರ ಬೆಳಗ್ಗೆ ಬಾಲಕನೋರ್ವ ತಂದ ಮೀನಿಗೆ ಅವರು ಏಲಂ ಪ್ರಕ್ರಿಯೆ ನಡೆಸುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಸ್ಥಳಕ್ಕೆ ಬಂದ ಮಿಥುನ್ ಕರ್ಕೇರಾ ಎಂಬಾತ, “ನೀನು ಯಾಕೆ ಮೀನು ತಂದಿ? ಯಾಕೆ ಏಲಂ ಮಾಡುತ್ತಿದ್ದಿ?” ಎಂದು ಪ್ರಶ್ನಿಸಿ, ಮುಖ, ಕಣ್ಣು, ಹೊಟ್ಟೆ ಹಾಗೂ ತಲೆಗೆ ಕೈಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಆರೋಪವೂ ಕೇಳಿಬಂದಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.