ಡೈಲಿ ವಾರ್ತೆ: ಫೆ./27/2026

ಸರ್ಕಾರಿ ಶಿಕ್ಷಣಕ್ಕೆ ಹೊಸ ಹೊಳಪು: ಹೊಸಂಗಡಿ ಪಿಯು ಕಾಲೇಜಿನಲ್ಲಿ ತಂತ್ರಜ್ಞಾನ ಕ್ರಾಂತಿ: “ಪ್ರತಿಭೆಗಳಿಗೊಂದು ಕನ್ನಡಿ, ಹೊಸತನಕ್ಕೊಂದು ಮುನ್ನುಡಿ” ಧ್ಯೇಯದೊಂದಿಗೆ ಮಾದರಿ ಕಾಲೇಜಾಗಿ ಹೊರಹೊಮ್ಮಿದ ಹೊಸಂಗಡಿ

ಹೊಸಂಗಡಿ: ಉಡುಪಿ ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿಯಲ್ಲಿ ‘EFFULGENCE’ ಎಂಬ ಶೀರ್ಷಿಕೆಯಡಿ “ಪ್ರತಿಭೆಗಳಿಗೊಂದು ಕನ್ನಡಿ, ಹೊಸತನಕ್ಕೊಂದು ಮುನ್ನುಡಿ” ಧ್ಯೇಯ ವಾಕ್ಯದೊಂದಿಗೆ ಅತ್ಯಾಧುನಿಕ ಸೌಲಭ್ಯಗಳ ಉದ್ಘಾಟನಾ ಕಾರ್ಯಕ್ರಮ ಭವ್ಯವಾಗಿ ನಡೆಯಿತು.

ಖಾಸಗಿ ಕಾಲೇಜುಗಳನ್ನು ಮೀರಿಸುವಷ್ಟು ಸೌಲಭ್ಯಗಳನ್ನು ಹೊಂದಿದ ಮೊದಲ ಸರಕಾರಿ ಕಾಲೇಜು ಎಂಬ ಹೆಗ್ಗಳಿಕೆಯನ್ನು ಈ ಸಂಸ್ಥೆ ಸಂಪಾದಿಸಿಕೊಂಡಿದೆ.

ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಗುರುರಾಜ ಗಂಟಿಹೊಳೆ ಉದ್ಘಾಟಿಸಿ ಮಾತನಾಡಿ, “ಸರಕಾರಿ ಕಾಲೇಜಿನಲ್ಲಿ ಇಷ್ಟು ಆಧುನಿಕ ಸೌಲಭ್ಯಗಳನ್ನು ಒದಗಿಸಿರುವುದು ಮಾದರಿ ಕಾರ್ಯ. ಮುಂದಿನ ಅಭಿವೃದ್ಧಿಗೆ ನಾನು ಸದಾ ಜೊತೆಗಿರುತ್ತೇನೆ” ಎಂದು ಭರವಸೆ ನೀಡಿದರು.

ಪ್ರಮುಖ ಉದ್ಘಾಟನೆಗಳು:

  1. CAN FINS HOMES LIMITED ಪ್ರಾಯೋಜಿತ ಸೋಲಾರ್ ಘಟಕ:
    Can Fin Homes Limited ಸಂಸ್ಥೆಯ CSR ನಿಧಿಯಡಿಯಲ್ಲಿ 10KW ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಇದರಿಂದ ಕಾಲೇಜಿಗೆ ವರ್ಷಪೂರ್ತಿ ತಡೆಯಿಲ್ಲದ ವಿದ್ಯುತ್ ಲಭ್ಯವಾಗಲಿದೆ. 26 ಕಂಪ್ಯೂಟರ್‌ಗಳು, 4 ಇಂಟರ್‌ಆಕ್ಟಿವ್ ಟಿವಿಗಳು, ಫ್ಯಾನ್‌ಗಳು ಹಾಗೂ ಪ್ರಾಜೆಕ್ಟರ್‌ಗಳನ್ನು ನಿರಂತರವಾಗಿ ಬಳಸುವ ಅವಕಾಶ ದೊರೆತಿದೆ.
  2. ಯೂನಿಯನ್ ಬ್ಯಾಂಕ್ ಪ್ರಾಯೋಜಿತ 86 ಇಂಚಿನ ಇಂಟರ್‌ಆಕ್ಟಿವ್ ಟಿವಿ:
    Union Bank of India ವತಿಯಿಂದ ವಿಜ್ಞಾನ ವಿಭಾಗಕ್ಕಾಗಿ 86 ಇಂಚಿನ ಇಂಟರ್‌ಆಕ್ಟಿವ್ ಟಿವಿ ಒದಗಿಸಲಾಗಿದೆ. ಉಪನ್ಯಾಸಕರಿಗೆ ವಿಶೇಷ ತರಬೇತಿ ನೀಡಲಾಗಿದ್ದು, ತಂತ್ರಜ್ಞಾನ ಆಧಾರಿತ ಪರಿಣಾಮಕಾರಿ ಬೋಧನೆಗೆ ಇದು ನೆರವಾಗಲಿದೆ. ಇಂತಹ ಸೌಲಭ್ಯ ಹೊಂದಿದ ಪ್ರಥಮ ಸರಕಾರಿ ಪಿಯು ಕಾಲೇಜು ಎಂಬ ಹೆಗ್ಗಳಿಕೆ ದೊರೆತಿದೆ.
  3. ಕೃಷ್ಣಮೂರ್ತಿ ಮಂಜ ಅತ್ಯಾಧುನಿಕ ಪ್ರಯೋಗಾಲಯ:
    ಶ್ರೀ ಕೃಷ್ಣಮೂರ್ತಿ ಮಂಜ ಅವರ ಆರ್ಥಿಕ ನೆರವಿನಿಂದ ನಿರ್ಮಿತ ಅತ್ಯಾಧುನಿಕ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು. ಯೋಜಿತ ಹಾಗೂ ಮಾದರಿ ವಿನ್ಯಾಸದ ಈ ಪ್ರಯೋಗಾಲಯ ಇತರ ಸಂಸ್ಥೆಗಳಿಗೆ ಆದರ್ಶವಾಗಿದೆ.
  4. ಸಿಇಟಿ ತರಬೇತಿ ಆರಂಭ:
    ಈ ವರ್ಷದಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ CET ತರಬೇತಿ ಆರಂಭಿಸಲಾಗಿದ್ದು, ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ನಿರಂತರ ತರಗತಿಗಳು ನಡೆಯಲಿವೆ.
    ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾಂತಿ ನಾಯ್ಕ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಪ್ರಾಂಶುಪಾಲ ರಣಜಿತ್ ಕುಮಾರ್ ಶೆಟ್ಟಿ ಪ್ರಸಾವನೆಗೈದು, ಕಾಲೇಜಿನ ಭವಿಷ್ಯ ಯೋಜನೆಗಳನ್ನು ವಿವರಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕರಾದ ವೆಂಕಟೇಶ್ P.R. ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಎಜಾಸ್ ಧನ್ಯವಾದ ಸಮರ್ಪಿಸಿದರು.