ಡೈಲಿ ವಾರ್ತೆ: ಫೆ./27/2026

ಉಡುಪಿಯಲ್ಲಿ ‘BB TV.APK’ ಆಪ್ ಡೌನ್‌ಲೋಡ್ ಮಾಡಿದ ಪರಿಣಾಮ 1.60 ಲಕ್ಷ ರೂ. ದೋಚಾಟ: ರಿಮೋಟ್ ಆಕ್ಸೆಸ್ ಮೂಲಕ ಸೈಬರ್ ವಂಚನೆ!

ಉಡುಪಿ, ಫೆ.27: ಸಾಮಾಜಿಕ ಜಾಲತಾಣದಲ್ಲಿ ಕಂಡ ಲಿಂಕ್ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡ ಪರಿಣಾಮ ವೃದ್ಧನೊಬ್ಬರು 1.60 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾಸ್ಕರ್ (63) ಎಂಬವರು ಫೆಬ್ರವರಿ 24 ರಂದು ಮಧ್ಯಾಹ್ನ 3:30ರ ಸುಮಾರಿಗೆ ತಮ್ಮ ಮನೆಯಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದ ವೇಳೆ “BB TV.APK – Latest Web Series and Movies” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದರು.
ನಂತರ ಫೆಬ್ರವರಿ 26 ರಂದು ಬೆಳಿಗ್ಗೆ 11:50ರ ಸುಮಾರಿಗೆ ತಮ್ಮ ಮೊಬೈಲ್‌ನ ಕೆನರಾ ಬ್ಯಾಂಕ್ ಅಪ್ಲಿಕೇಶನ್ ಮೂಲಕ ಬ್ಯಾಂಕ್ ವ್ಯವಹಾರ ವಿವರಗಳನ್ನು ಪರಿಶೀಲಿಸಿದಾಗ ಖಾತೆಯಿಂದ ಒಟ್ಟು 1,60,000 ರೂ. ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ.

ಫೆಬ್ರವರಿ 25ರ ಬೆಳಿಗ್ಗೆ 9:33ರಿಂದ ಫೆಬ್ರವರಿ 26ರ ಬೆಳಿಗ್ಗೆ 9:48ರ ಅವಧಿಯಲ್ಲಿ ಕ್ರಮವಾಗಿ 65,000 ರೂ., 15,000 ರೂ., 15,000 ರೂ. ಮತ್ತು 65,000 ರೂ. ಹಣ ಖಾತೆಯಿಂದ ಕಡಿತಗೊಂಡಿರುವುದು ಪತ್ತೆಯಾಗಿದೆ.

ಅಪರಿಚಿತರು “BB TV.APK” ಆಪ್ ಮೂಲಕ ಮೊಬೈಲ್‌ಗೆ ರಿಮೋಟ್ ಆಕ್ಸೆಸ್ ಪಡೆದು ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2026ರಡಿ ಕಲಂ 318(4) BNS ಮತ್ತು 66(D) ಐಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.