

ಡೈಲಿ ವಾರ್ತೆ: ಮಾ./02/2026

ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಭೀತಿ: ಅಯತೊಲ್ಲಾ ಖಮೇನಿ ಹತ್ಯೆಗೆ ಕೆಂಪು ಬಾವುಟದ ಪ್ರತಿಜ್ಞೆ; ಅಮೆರಿಕ-ಇಸ್ರೇಲ್ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಮಳೆ!

ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬೆನ್ನಲ್ಲೇ ಇಡೀ ವಲಯ ಯುದ್ಧದ ಅಂಚಿಗೆ ಬಂದು ನಿಂತಿದೆ. ತನ್ನ ನಾಯಕನ ಸಾವಿಗೆ ಸೇಡು ತೀರಿಸಿಕೊಳ್ಳಲು ಇರಾನ್ ಈಗ ‘ಕೆಂಪು ಬಾವುಟ’ ಹಾರಿಸಿದ್ದು, ಅಮೆರಿಕ ಮತ್ತು ಇಸ್ರೇಲ್ ಮಿಲಿಟರಿ ನೆಲೆಗಳ ಮೇಲೆ ಭೀಕರ ಪ್ರತಿದಾಳಿ ಆರಂಭಿಸಿದೆ.

ಸೇಡಿನ ಸಂಕೇತ ‘ಕೆಂಪು ಬಾವುಟ’
ಇರಾನ್‌ನ ಪವಿತ್ರ ನಗರ ಕೋಮ್‌ನ ಜಮ್ಕರನ್ ಮಸೀದಿಯ ಗೋಪುರದ ಮೇಲೆ ಕೆಂಪು ಧ್ವಜವನ್ನು ಹಾರಿಸಲಾಗಿದೆ. ಶಿಯಾ ಸಂಪ್ರದಾಯದಂತೆ ಈ ಧ್ವಜವು ‘ಅನ್ಯಾಯವಾಗಿ ಚೆಲ್ಲಿದ ರಕ್ತಕ್ಕೆ ಸೇಡು ತೀರಿಸಿಕೊಳ್ಳುವವರೆಗೆ ವಿಶ್ರಮಿಸುವುದಿಲ್ಲ’ ಎಂಬ ಯುದ್ಧ ಘೋಷಣೆಯಾಗಿದೆ. ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಹಾರಾಡುತ್ತಿರುವ ಈ ಧ್ವಜಗಳು, ಇರಾನ್ ದೊಡ್ಡ ಮಟ್ಟದ ಮಿಲಿಟರಿ ಕಾರ್ಯಾಚರಣೆಗೆ ಸಜ್ಜಾಗಿರುವುದನ್ನು ಜಗತ್ತಿಗೆ ಸಾರುತ್ತಿವೆ.
ಅಮೆರಿಕದ ಯುದ್ಧನೌಕೆ ಮೇಲೆ ಮಿಸೈಲ್ ದಾಳಿ:
ಖಮೇನಿ ಹತ್ಯೆಯಿಂದ ಕೆರಳಿರುವ ಇರಾನ್, ಅಮೆರಿಕದ ಪ್ರಬಲ ಏರ್‌ಕ್ರಾಫ್ಟ್ ಕ್ಯಾರಿಯರ್ ‘ಅಬ್ರಹಾಂ ಲಿಂಕನ್’ ಅನ್ನು ಗುರಿಯಾಗಿಸಿಕೊಂಡು ನಾಲ್ಕು ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಇದರೊಂದಿಗೆ ಇರಾಕ್, ಕುವೈತ್, ಕತಾರ್ ಮತ್ತು ಯುಎಇನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ಪಡೆಗಳು ಮುಗಿಬಿದ್ದಿವೆ. ಬಹ್ರೇನ್‌ನಲ್ಲಿರುವ ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ ಪ್ರಧಾನ ಕಚೇರಿಯೂ ಇರಾನ್ ದಾಳಿಗೆ ತತ್ತರಿಸಿದೆ. ‘ಆಪರೇಷನ್ ಎಪಿಕ್ ಫ್ಯೂರಿ’ ಭಾಗವಾಗಿ ನಡೆದ ಈ ಸಂಘರ್ಷದಲ್ಲಿ ಮೂವರು ಅಮೆರಿಕನ್ ಸೈನಿಕರು ಸಾವನ್ನಪ್ಪಿರುವುದು ದೃಢಪಟ್ಟಿದೆ.
ಇಸ್ರೇಲ್ ಮೇಲೆ ಮುಂದುವರಿದ ದಾಳಿ:
ಇತ್ತ ಇಸ್ರೇಲ್‌ನ ಬೀಟ್ ಶೆಮೆಶ್ ಪ್ರದೇಶದ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಯುಎಇ ರಕ್ಷಣಾ ಸಚಿವಾಲಯದ ವರದಿಯಂತೆ, ಇರಾನ್ ಒಟ್ಟು 165 ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು 541 ಡ್ರೋನ್‌ಗಳನ್ನು ಹಾರಿಸಿದ್ದು, ವಾಯುಪ್ರದೇಶವು ಸಂಪೂರ್ಣವಾಗಿ ರಣಾಂಗಣವಾಗಿ ಮಾರ್ಪಟ್ಟಿದೆ.
ಹೊಸ ನಾಯಕತ್ವದ ಉದಯ:
ಖಮೇನಿ ನಿಧನದ ನಂತರ ಇರಾನ್‌ನಲ್ಲಿ ಆಡಳಿತಾತ್ಮಕ ಬದಲಾವಣೆಗಳಾಗಿದ್ದು, ಗಾರ್ಡಿಯನ್ ಕೌನ್ಸಿಲ್‌ನ ಅಲಿರೆಝಾ ಅರಾಫಿ ಅವರನ್ನು ತಾತ್ಕಾಲಿಕ ನಾಯಕತ್ವ ಮಂಡಳಿಗೆ ನೇಮಿಸಲಾಗಿದೆ. ಇಸ್ಲಾಮಿಕ್ ರೆವುಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮುಖ್ಯಸ್ಥರಾಗಿ ಅನುಭವಿ ಅಧಿಕಾರಿ ಬ್ರಿಗೇಡಿಯರ್ ಜನರಲ್ ಅಹ್ಮದ್ ವಹಿದಿ ಅಧಿಕಾರ ವಹಿಸಿಕೊಂಡಿದ್ದಾರೆ. ಇನ್ನು 48 ಗಂಟೆಗಳ ಒಳಗೆ ದೇಶಕ್ಕೆ ಹೊಸ ‘ಸುಪ್ರೀಂ ಲೀಡರ್’ ಆಯ್ಕೆಯಾಗಲಿದ್ದು, ಆ ಬಳಿಕ ಇರಾನ್ ಇನ್ನಷ್ಟು ಭೀಕರ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಟ್ಟಾರೆಯಾಗಿ, “ನಾವು ಶಾಂತಿಯನ್ನು ಬಯಸುತ್ತೇವೆ, ಆದರೆ ನಮ್ಮ ನಾಯಕನ ರಕ್ತಕ್ಕೆ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ” ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಘೋಷಿಸಿರುವುದು ಇಡೀ ವಿಶ್ವವನ್ನು ಆತಂಕಕ್ಕೆ ತಳ್ಳಿದೆ.