

ಡೈಲಿ ವಾರ್ತೆ: ಮಾ./02/2026

ಓಮನ್ ಕೊಲ್ಲಿಯಲ್ಲಿ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ: ಭಾರತೀಯ ನಾವಿಕ ದುರ್ಮರಣ

ಮಸ್ಕತ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಓಮನ್ ಕೊಲ್ಲಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ.
ಇರಾನ್ ವಿರುದ್ಧದ ಸಂಘರ್ಷದ ಭಾಗವಾಗಿ ನಡೆದ ಡ್ರೋನ್ ದಾಳಿಯಲ್ಲಿ ತೈಲ ಟ್ಯಾಂಕರ್‌ನಲ್ಲಿದ್ದ ಭಾರತೀಯ ಮೂಲದ ನಾವಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಓಮನ್ ಸರ್ಕಾರ ಅಧಿಕೃತವಾಗಿ ಖಚಿತಪಡಿಸಿದೆ.
ಸೋಮವಾರ ಮಸ್ಕತ್ ಕರಾವಳಿಯ ಓಮನ್ ಕೊಲ್ಲಿಯ ಸಮೀಪ ಸಂಚರಿಸುತ್ತಿದ್ದ ‘MKD VYOM’ ಹೆಸರಿನ ತೈಲ ಟ್ಯಾಂಕರ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಮಾರ್ಷಲ್ ದ್ವೀಪಗಳ ಧ್ವಜ ಹೊತ್ತಿದ್ದ ಈ ಹಡಗಿಗೆ ಬಾಂಬ್ ಹೊತ್ತೊಯ್ಯುತ್ತಿದ್ದ ಡ್ರೋನ್ ಬೋಟ್‌ವೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಹಡಗಿನಲ್ಲಿದ್ದ ಭಾರತೀಯ ನಾವಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಕ್ಷಣಾ ಕಾರ್ಯಾಚರಣೆ: ದಾಳಿಯ ನಂತರ ಎಚ್ಚೆತ್ತ ಓಮನ್ ರಕ್ಷಣಾ ಪಡೆಗಳು ತಕ್ಷಣವೇ ಕಾರ್ಯಾಚರಣೆ ನಡೆಸಿ ಹಡಗಿನಲ್ಲಿದ್ದ ಉಳಿದ 21 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿವೆ.
ಇರಾನ್ ಮತ್ತು ಇತರ ಶಕ್ತಿಗಳ ನಡುವಿನ ಯುದ್ಧದ ಪರಿಣಾಮವಾಗಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಹಡಗಿನ ಮೇಲೆ ನೇರವಾಗಿ ಡ್ರೋನ್ ಬೋಟ್ ಅನ್ನು ಡಿಕ್ಕಿ ಹೊಡೆಸುವ ಮೂಲಕ ಸ್ಫೋಟ ಸಂಭವಿಸಿದೆ.
ಓಮನ್ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯು ಈ ದಾಳಿಯನ್ನು ದೃಢಪಡಿಸಿದ್ದು, ಮೃತ ಸಿಬ್ಬಂದಿ ಭಾರತದ ಮೂಲದವರು ಎಂದು ತಿಳಿಸಿದೆ. ಸದ್ಯ ಮೃತರ ಹೆಚ್ಚಿನ ವಿವರಗಳಿಗಾಗಿ ಮತ್ತು ಅವರ ಕುಟುಂಬವನ್ನು ಸಂಪರ್ಕಿಸಲು ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ.