ಡೈಲಿ ವಾರ್ತೆ: ಮಾ./03/2026

ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌:
ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ ಪಂದ್ಯಗಳು – ಐದು ತವರು ಕಾದಾಟಗಳಿಗೆ ಆರ್‌ಸಿಬಿ ಅಧಿಕೃತ ಘೋಷಣೆ

ಬೆಂಗಳೂರು, ಮಾ.3: ರಾಯಲ್ ಚಾಲೆಂಜ್ರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮುಂದಿನ ಇಂಡಿಯನ್ ಪ್ರೀಮಿಯಾರ್ ಲೀಗ್ (IPL) ಹಂಗಾಮಿನಲ್ಲಿ ತನ್ನ ಐದು ತವರು ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಸುವುದಾಗಿ ಅಧಿಕೃತವಾಗಿ ತಿಳಿಸಿದೆ.

ಉದ್ಘಾಟನಾ ಪಂದ್ಯ ಸೇರಿದಂತೆ ಐದು ಕಾದಾಟಗಳು ಚಿನ್ನಸ್ವಾಮಿ ಮೈದಾನದಲ್ಲೇ ನಡೆಯಲಿವೆ ಎಂದು ತಂಡದ ಮಾಧ್ಯಮ ಪ್ರಕಟಣೆ ಸ್ಪಷ್ಟಪಡಿಸಿದೆ.

ಪೂರ್ವ ನಿಗದಿಯಂತೆ ಎರಡು ತವರು ಪಂದ್ಯಗಳನ್ನು ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಲಾಗಿದೆ.

ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿ ಚೊಚ್ಚಲ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆರ್‌ಸಿಬಿ, ಜೂನ್ 4ರಂದು ನಡೆದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಸಂಭವಿಸಿದ ಕಾಲ್ತುಳಿತ ದುರಂತದ ಬಳಿಕ ಟೀಕೆಗೆ ಗುರಿಯಾಗಿತ್ತು.

ದುರಂತದ ಹಿನ್ನೆಲೆ ಸರ್ಕಾರ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು.
ನಂತರ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ವರದಿಯಲ್ಲಿ ಉಲ್ಲೇಖಿಸಲಾದ ಸುರಕ್ಷತಾ ಕೊರತೆಗಳನ್ನು ಸರಿಪಡಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕ್ರಮ ಕೈಗೊಂಡಿತು. ತುರ್ತು ನಿರ್ಗಮನ ದ್ವಾರಗಳ ವಿಸ್ತರಣೆ, ಅಗಲವಾದ ಪ್ರವೇಶ ಮಾರ್ಗಗಳು, ಆಂಬುಲೆನ್ಸ್ ಸಂಚಾರಕ್ಕೆ ಪ್ರತ್ಯೇಕ ದಾರಿ, ಪಾರ್ಕಿಂಗ್ ವ್ಯವಸ್ಥೆಯ ಸುಧಾರಣೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಸೇರಿದಂತೆ ವಿವಿಧ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಯಿತು.
ಸುರಕ್ಷತಾ ಕ್ರಮಗಳ ಪರಿಶೀಲನೆಯ ಬಳಿಕ ರಾಜ್ಯ ಸರ್ಕಾರ ಪಂದ್ಯ ಆಯೋಜನೆಗೆ ಅನುಮತಿ ನೀಡಿದ್ದು, ಅದರ ಬೆನ್ನಲ್ಲೇ ಆರ್‌ಸಿಬಿ ಐದು ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸುವುದಾಗಿ ದೃಢಪಡಿಸಿದೆ.

ಕಾಲ್ತುಳಿತ ದುರಂತದ ನಂತರ ಚಿನ್ನಸ್ವಾಮಿಯಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಯಾವುದೇ ಪ್ರಮುಖ ದೇಶೀಯ ಪಂದ್ಯಗಳು ನಡೆದಿರಲಿಲ್ಲ. ಇದೀಗ ಮತ್ತೆ ಐಪಿಎಲ್ ಪಂದ್ಯಗಳು ನಡೆಯಲಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.