ಡೈಲಿ ವಾರ್ತೆ: ಮಾ./03/2026

ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ: ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ – ಆರೋಪಿ ಭಟ್ಕಳ ನಿವಾಸಿ ಶಂಕರ್‌ ಮಸ್ತಪ್ಪ ಮೊಗೆರ್ ಬಂಧನ

​ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ ಹರಡುವ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಪ್ರಯತ್ನಗಳ ವಿರುದ್ಧ ಮಂಗಳೂರು ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಉಳ್ಳಾಲದ ಮಸೀದಿಯ ಬಳಿ ಬಾಂಬ್ ಸ್ಫೋಟಿಸುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಬೆದರಿಕೆ ಹಾಕಿದ್ದ ಭಟ್ಕಳ ಮೂಲದ ವ್ಯಕ್ತಿಯನ್ನು ಮಂಗಳೂರು ನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತನನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ದೇವಿನಗರ ನಿವಾಸಿ ಶಂಕರ್‌ ಮಸ್ತಪ್ಪ ಮೊಗೆರ್ (35) ಎಂದು ಗುರುತಿಸಲಾಗಿದೆ. ಈತ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಬರಹಗಳನ್ನು ಹಂಚಿಕೊಂಡಿದ್ದ ಎನ್ನಲಾಗಿದೆ.

ಆರೋಪಿಯು ಇನ್‌ಸ್ಟಾಗ್ರಾಂ ಕಾಮೆಂಟ್ ವಿಭಾಗದಲ್ಲಿ, “ಸಪೋರ್ಟ್ ಮಾಡಿ ಬ್ರೋ, ಉಳ್ಳಾಲ ಮಸೀದಿ ಹತ್ತಿರ ಬಾಂಬ್ ಬ್ಲಾಸ್ಟ್ ಮಾಡ್ತೀನಿ” ಎಂದು ಬರೆದುಕೊಂಡಿದ್ದನು. ಈ ಪ್ರಚೋದನಕಾರಿ ಹೇಳಿಕೆಯು ಧರ್ಮಗಳ ನಡುವೆ ದ್ವೇಷ ಬಿತ್ತುವ ಹಾಗೂ ಹಿಂಸೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಕೂಡಿದೆ ಎಂದು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಈ ಪ್ರಚೋದನಕಾರಿ ಕಾಮೆಂಟ್ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಎಚ್ಚೆತ್ತ ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು, ಮಾರ್ಚ್ 2 ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಿವಿಧ ಕಠಿಣ ಸೆಕ್ಷನ್‌ಗಳ ಮೂಲಕ ಎಫ್‌ಐಆರ್ ದಾಖಲಿಸಲಾಗಿತ್ತು.

​ಮಂಗಳೂರು ನಗರದ ಉಳ್ಳಾಲ ಠಾಣೆಯ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ, ಮಾರ್ಚ್ 3ರ ಮಂಗಳವಾರದಂದು ಆರೋಪಿಯನ್ನು ದಸ್ತಗಿರಿ ಮಾಡಿದೆ. ಬಂಧಿತನಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.