ಡೈಲಿ ವಾರ್ತೆ: ಮಾ./04/2026

ಮಲ್ಪೆ: ಹಿಂದೂ ಸಂಘಟನೆಯ ಮುಖಂಡ ಮಂಜು ಕೊಳ ಮೇಲೆ ಚೂರಿ ಇರಿತ; ಐವರ ಬಂಧನ

​ಉಡುಪಿ: ಜಿಲ್ಲೆಯ ಮಲ್ಪೆ ಸಮೀಪ ಮಂಗಳವಾರ ರಾತ್ರಿ ನಡೆದ ಭೀಕರ ಘಟನೆಯೊಂದರಲ್ಲಿ, ಹಿಂದೂ ಸಂಘಟನೆಯ ಪ್ರಮುಖ ಮುಖಂಡ ಹಾಗೂ ನಗರಸಭೆಯ ಮಾಜಿ ಉಪಾಧ್ಯಕ್ಷೆಯ ಪತಿ ಮಂಜು ಕೊಳ ಅವರ ಮೇಲೆ ಯುವಕರ ತಂಡವೊಂದು ಚೂರಿಯಿಂದ ಹಲ್ಲೆ ನಡೆಸಿದೆ. ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗೊಂಡಿರುವ ಅವರನ್ನು ಉಡುಪಿಯ ಆದರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

​ಘಟನೆಯ ವಿವರ :
​ಹಿಂದೂ ಯುವಸೇನೆಯ ಮುಖಂಡ ಹಾಗೂ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿಯಾಗಿರುವ ಮಂಜು ಕೊಳ ಅವರು, ಮಂಗಳವಾರ ರಾತ್ರಿ ಮಲ್ಪೆ ಬೀಚ್ ಬಳಿ ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಂಧಾನ (ರಾಜಿ ಪಂಚಾಯಿತಿ) ನಡೆಸಲು ತೆರಳಿದ್ದರು. ಧನುಷ್ ಎಂಬ ಯುವಕನಿಗೆ ಸಂಬಂಧಿಸಿದ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ತಂಡದಲ್ಲಿದ್ದ ಯುವಕನೋರ್ವ ಏಕಾಏಕಿ ಚೂರಿಯಿಂದ ಮಂಜು ಅವರ ಹೊಟ್ಟೆಗೆ ಇರಿದಿದ್ದಾನೆ.

​ದಾಳಿಯ ಬೆನ್ನಲ್ಲೇ ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದ ಮಂಜು ಅವರನ್ನು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿ ಘಟನೆಯನ್ನು ಖಂಡಿಸಿದ್ದಾರೆ.

​ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಒಟ್ಟು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು:
​ಪ್ರಜ್ಞೇಶ್ (ಪಲಿಮಾರು ನಿವಾಸಿ),​ಪುನೀತ್,​ಅಮೃತ್ ಭಂಡಾರಿ, ​ಅಭಿಜಿತ್ ಮತ್ತು ಇನ್ನೊಬ್ಬ ಯುವಕ ಎಂದು ಗುರುತಿಸಲಾಗಿದೆ.

​ ಬಂಧಿತರಲ್ಲಿ ಇಬ್ಬರು ಯುವಕರ ಮೇಲೆ ಈ ಹಿಂದೆಯೇ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
​ಪ್ರಸ್ತುತ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.