

ಡೈಲಿ ವಾರ್ತೆ: ಮಾ./04/2026

ಇಂದು ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ: ಟೆಹರಾನ್‌ನಲ್ಲಿ ಲಕ್ಷಾಂತರ ಜನರ ಕಂಬನಿ, ಇಸ್ರೇಲ್‌ನಿಂದ ತೀವ್ರ ಎಚ್ಚರಿಕೆ

ಟೆಹರಾನ್, ಮಾರ್ಚ್ 4: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ತಾರಕಕ್ಕೇರಿರುವ ಬೆನ್ನಲ್ಲೇ, ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (86) ಅವರ ಅಂತ್ಯಕ್ರಿಯೆ ವಿಧಿವಿಧಾನಗಳು ಇಂದು (ಮಾ.4) ಮಧ್ಯರಾತ್ರಿಯಿಂದ ಆರಂಭವಾಗಲಿವೆ.
ಮಾರ್ಚ್ 1ರಂದು ಇವರ ನಿಧನವನ್ನು ಅಧಿಕೃತವಾಗಿ ಘೋಷಿಸಲಾಗಿದ್ದು, ಇಡೀ ಇರಾನ್ ರಾಷ್ಟ್ರ ಶೋಕ ಸಾಗರದಲ್ಲಿ ಮುಳುಗಿದೆ.
ಕಳೆದ ವರ್ಷ ಇಸ್ರೇಲ್ ವಿರುದ್ಧ ಪ್ರತಿಕಾರದ ಭಾಷಣ ಮಾಡಿದ್ದ ಟೆಹರಾನ್‌ನ ಐತಿಹಾಸಿಕ ‘ಇಮಾಮ್ ಖಮೇನಿ ಮೊಸಲ್ಲಾ’ ಮಂದಿರದಲ್ಲಿಯೇ ಕಳೆದ ಮೂರು ದಿನಗಳಿಂದ ಖಮೇನಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಅಲಿ ಖಮೇನಿ ಅವರಿಗೆ ಅಂತಿಮ ನಮನ ಸಲ್ಲಿಸಲು ಲಕ್ಷಾಂತರ ಅನುಯಾಯಿಗಳು ಮೊಸಲ್ಲಾ ಮಂದಿರದತ್ತ ಧಾವಿಸುತ್ತಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆಯಿಂದ ಅಂತ್ಯಕ್ರಿಯೆಯ ಧಾರ್ಮಿಕ ವಿಧಿವಿಧಾನಗಳು ಅಧಿಕೃತವಾಗಿ ಚಾಲನೆ ಪಡೆಯಲಿವೆ.
40 ದಿನಗಳ ಶೋಕಾಚರಣೆ:
ಇರಾನ್ ಸರ್ಕಾರವು ದೇಶಾದ್ಯಂತ ಸುಮಾರು 40 ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ ಎಂದು ವರದಿಯಾಗಿದೆ. ಮುಂದಿನ ಮೂರು ದಿನಗಳ ಕಾಲ ವಿವಿಧ ಹಂತದ ಧಾರ್ಮಿಕ ಸಂಪ್ರದಾಯಗಳು ಮುಂದುವರಿಯಲಿವೆ. ಅಂತ್ಯಕ್ರಿಯೆಯ ಮೆರವಣಿಗೆಯ ಹಾದಿ ಮತ್ತು ಸ್ಥಳದ ಬಗ್ಗೆ ಭದ್ರತಾ ಕಾರಣಗಳಿಗಾಗಿ ಇರಾನ್ ಸದ್ಯಕ್ಕೆ ಯಾವುದೇ ಗುಪ್ತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈ ಮಹತ್ವದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ಗಣ್ಯರು ಹಾಗೂ ವಿವಿಧ ದೇಶಗಳ ಮುಖ್ಯಸ್ಥರು ಭಾಗವಹಿಸುವ ಸಾಧ್ಯತೆಯಿದೆ.
ಇಸ್ರೇಲ್‌ನ ಕಠಿಣ ಎಚ್ಚರಿಕೆ:
ಇತ್ತ ಖಮೇನಿ ಅವರ ಅಂತ್ಯಕ್ರಿಯೆ ಪ್ರಕ್ರಿಯೆ ನಡೆಯುತ್ತಿದ್ದರೆ, ಅತ್ತ ಇಸ್ರೇಲ್ ತನ್ನ ಆಕ್ರಮಣಕಾರಿ ನಿಲುವನ್ನು ಮುಂದುವರಿಸಿದೆ. ಇರಾನ್‌ನ ಮುಂದಿನ ಸರ್ವೋಚ್ಚ ನಾಯಕನಾಗಿ ಯಾರು ಆಯ್ಕೆಯಾಗುತ್ತಾರೋ ಅವರಿಗೂ “ಇದೇ ಗತಿ ಬರಲಿದೆ” ಎಂದು ಇಸ್ರೇಲ್ ನೇರ ಎಚ್ಚರಿಕೆ ನೀಡಿದೆ. ಈ ಹೇಳಿಕೆಯು ಈಗಾಗಲೇ ಉದ್ವಿಗ್ನಗೊಂಡಿರುವ ಇರಾನ್-ಇಸ್ರೇಲ್ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ.
ಖಮೇನಿ ಅವರ ನಿರ್ಗಮನದ ನಂತರ ಇರಾನ್‌ನ ರಾಜಕೀಯ ಭವಿಷ್ಯ ಮತ್ತು ಈ ಭಾಗದಲ್ಲಿ ಶಾಂತಿ ಸ್ಥಾಪನೆಯ ಸಾಧ್ಯತೆಗಳ ಮೇಲೆ ಇಡೀ ಜಗತ್ತಿನ ಕಣ್ಣು ನೆಟ್ಟಿದೆ.