ಡೈಲಿ ವಾರ್ತೆ: ಮಾ./04/2026

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಾರಥಿಯಾಗಿ ಯುವ ನಾಯಕ ವಿಕಾಸ್ ಹೆಗ್ಡೆ ನೇಮಕ

​ಕುಂದಾಪುರ: ಕರಾವಳಿ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಕುಂದಾಪುರದಲ್ಲಿ ಕಾಂಗ್ರೆಸ್ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಲು ಕೆಪಿಸಿಸಿ ಭಾರಿ ಕಸರತ್ತು ನಡೆಸಿದೆ. ಪಕ್ಷದ ಚಟುವಟಿಕೆಗಳಿಗೆ ಹೊಸ ಕಳೆ ತುಂಬುವ ನಿಟ್ಟಿನಲ್ಲಿ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಯುವ ನಾಯಕ ಕೆ. ವಿಕಾಸ್ ಹೆಗ್ಡೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

​ಕಳೆದ ಕೆಲವು ಸಮಯದಿಂದ ಕುಂದಾಪುರ ಮತ್ತು ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ನಾಯಕತ್ವದಲ್ಲಿ ಬದಲಾವಣೆ ತರಬೇಕು ಎಂಬ ಒತ್ತಾಯ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಂದ ಕೇಳಿಬಂದಿತ್ತು. ಕ್ಷೇತ್ರದಲ್ಲಿ ನಿಷ್ಕ್ರೀಯಗೊಂಡಿದ್ದ ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಮರುಜೀವ ನೀಡಲು ಸಮರ್ಥ ಹಾಗೂ ಯುವ ನಾಯಕತ್ವದ ಅಗತ್ಯವಿದೆ ಎಂದು ಕ್ಷೇತ್ರದ ಹಿರಿಯ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ನಾಯಕತ್ವ, ಸ್ಥಳೀಯ ಮುಖಂಡರಿಂದ ಮಾಹಿತಿ ಪಡೆದು ಅಂತಿಮವಾಗಿ ಬದಲಾವಣೆಯ ಮೊಹರು ಒತ್ತಿದೆ.

​ನೂತನ ಸಾರಥಿಗಳ ಘೋಷಣೆ:
​ಕಳೆದ ಫೆಬ್ರವರಿ 9ರಂದು ಹೊರಡಿಸಲಾದ ಅಧಿಕೃತ ಆದೇಶದನ್ವಯ, ಕುಂದಾಪುರ ಬ್ಲಾಕ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಕೆ. ವಿಕಾಸ್ ಹೆಗ್ಡೆ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ತಿಮ್ಮ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ. ಸಂಘಟನಾ ಚತುರತೆ ಮತ್ತು ಯುವಕರನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿರುವ ವಿಕಾಸ್ ಹೆಗ್ಡೆ ಅವರಿಗೆ ಪಟ್ಟ ಕಟ್ಟಿರುವುದು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

​ವಿಕಾಸ್ ಹೆಗ್ಡೆ ಅವರ ನೇಮಕಾತಿಯನ್ನು ಕುಂದಾಪುರ ಕಾಂಗ್ರೆಸ್ ಪಾಳಯವು ಮುಕ್ತಕಂಠದಿಂದ ಸ್ವಾಗತಿಸಿದೆ.
​ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸೇರಿದಂತೆ ಹಲವು ಪ್ರಮುಖ ಮುಖಂಡರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

​”ಯುವ ನಾಯಕತ್ವಕ್ಕೆ ಮನ್ನಣೆ ನೀಡಿರುವುದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತಷ್ಟು ಪುಟಿದೇಳಲಿದೆ” ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.