ಡೈಲಿ ವಾರ್ತೆ: ಮಾ./05/2026

ಕೋಟ: ಆಟೋ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವೃದ್ಧ ಚಿಕಿತ್ಸೆ ಫಲಿಸದೆ ಸಾವು

​ಕೋಟ: ರಸ್ತೆ ದಾಟಲು ನಿಂತಿದ್ದ ವೇಳೆ ಅತೀ ವೇಗವಾಗಿ ಬಂದ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ.

​ಯಡ್ತಾಡಿ ಹಟ್ಟಿಕೊಟ್ಟಿಗೆ ನಿವಾಸಿ ಸಂಜೀವ ಪೂಜಾರಿ ಮೃತಪಟ್ಟ ದುರ್ದೈವಿ. ಕಳೆದ ಫೆಬ್ರವರಿ 22 ರಂದು ಮಧ್ಯಾಹ್ನ ಸುಮಾರು 2.00 ಗಂಟೆಯ ವೇಳೆಗೆ ಸಂಜೀವ ಪೂಜಾರಿಯವರು ತಮ್ಮ ಮಗ ಪ್ರವೀಣ ಪೂಜಾರಿ ಅವರೊಂದಿಗೆ ಕಾಜ್ರಳ್ಳಿ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ಶಿರಿಯಾರ ಗ್ರಾಮದ ಸಾಹೇಬ್ರಕಟ್ಟೆ ಶನಿಶ್ವರ ದೇವಸ್ಥಾನದ ಬಳಿ ರಸ್ತೆ ದಾಟಲು ನಿಂತಿದ್ದ ಸಂದರ್ಭದಲ್ಲಿ, ಕಾಜ್ರಹಳ್ಳಿಯಿಂದ ಸಾಹೇಬ್ರಕಟ್ಟೆ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ಚಾಲಕ ಸಂದೀಪ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ.

​ಅಪಘಾತದ ಭೀಕರತೆಗೆ ರಸ್ತೆಗೆ ಬಿದ್ದ ಸಂಜೀವ ಪೂಜಾರಿಯವರ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿತ್ತು. ತಕ್ಷಣ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಫೆಬ್ರವರಿ 27 ರಂದು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಇಂದು (ಮಾಚ್ 05) ಮುಂಜಾನೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
​ಈ ಕುರಿತು ಮೃತರ ಪುತ್ರ ಪ್ರವೀಣ ಪೂಜಾರಿ ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕನ ವಿರುದ್ಧ ಅಪರಾಧ ಕ್ರಮಾಂಕ 36/2026, ಕಲಂ: 281, 106 BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.